ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಈ ಪುರಾವೆ ಅಗತ್ಯ

ಕೊಚ್ಚಿ, ಜ.4: ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಪ್ರವೇಶಬಯಸುವ ಮಹಿಳೆಯರು ತಮ್ಮ ವಯಸ್ಸಿನ ಬಗ್ಗೆ ಪುರಾವೆಯನ್ನು ಒದಗಿಸಬೇಕೆಂದು ಸೂಚಿಸಲು ದೇವಸ್ಥಾನದ ಅಧಿಕಾರಿಗಳು ನಿರ್ಧರಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.
10ರಿಂದ 50 ವರ್ಷದ ಮಹಿಳೆಯರಿಗೆ ದೇವಸ್ಥಾನಕ್ಕೆ ಪ್ರವೇಶ ನಿಷೇಧಿಸಲಾಗಿದೆ.ಆದರೆ ದೇವಳ ಪ್ರವೇಶಕ್ಕೆ ಯತ್ನಿಸುವ ಮಹಿಳೆಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿರುವ ಟ್ರಾವಂಕೋರ್ ದೇವಸ್ವಂ ಮಂಡಳಿ(ಟಿಡಿಬಿ) ನಿರ್ಧರಿಸಿದೆ.
ಮಹಿಳೆಯರು ಮತ್ತು ಭದ್ರತಾ ಸಿಬ್ಬಂದಿಗಳ ಮಧ್ಯೆ ಅನಾವಶ್ಯಕ ವಾದವನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುವುದು ಎಂದು ಟಿಡಿಬಿ ಅಧ್ಯಕ್ಷ ಎ.ಪದ್ಮಕುಮಾರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿಯಾಗಿರುವ ಕಾರಣ ಮುಟ್ಟಿನ (ಋತಿಮತಿಯಾಗುವ) ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಳಕ್ಕೆ ಪ್ರವೇಶ ನಿಷಿದ್ಧವಾಗಿದೆ. ಇತ್ತೀಚೆಗೆ 11 ವರ್ಷದ ಬಾಲಕಿಯೋರ್ವಳು ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದ ಉದಾಹರಣೆ ನೀಡಿರುವ ಪದ್ಮನಾಭ್, ದೇವಸ್ಥಾನದ ಸಂಪ್ರದಾಯದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಾಗದು. ಈ ವರ್ಷ ಕನಿಷ್ಟ 260 ಮಹಿಳೆಯರನ್ನು ದೇವಸ್ಥಾನಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ ಎಂದು ತಿಳಿಸಿದ್ದಾರೆ. ಮಹಿಳೆಯರಿಗೆ ವಯಸ್ಸಿನ ನಿರ್ಬಂಧ ವಿಧಿಸಿರುವ ಸಂಪ್ರದಾಯವನ್ನು ವಿರೋಧಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಗೆ ಬಾಕಿಯಿದೆ.
ನವೆಂಬರ್ 15ರಿಂದ ಜನವರಿ 14ರವರೆಗಿನ ಮೂರು ತಿಂಗಳು ಶಬರಿಮಲೆಗೆ ತೆರಳಿ ಅಯ್ಯಪ್ಪ ಭಕ್ತರು ಹರಕೆ ಸಲ್ಲಿಸುವ ಅವಧಿಯಾಗಿದೆ.