ಪ್ರತಿ ತಿಂಗಳ 2ನೆ ರವಿವಾರ ‘ವಿರಳ ಸಂಚಾರ ದಿನ’: ಸಾರಿಗೆ ಸಚಿವ ಎಚ್.ಎಂ.ರೇವಣ್ಣ

ಬೆಂಗಳೂರು, ಜ. 4: ಉದ್ಯಾನನಗರಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ವಾಹನ ದಟ್ಟಣೆ ತಡೆಯುವ ಉದ್ದೇಶದಿಂದ ಪ್ರತಿ ತಿಂಗಳ 2ನೆ ರವಿವಾರ ವಿರಳ ಸಂಚಾರ ದಿನ (ಲೆಸ್ ಟ್ರಾಫಿಕ್ ಡೇ) ಅಭಿಯಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದ್ದಾರೆ.
2018 ಫೆಬ್ರವರಿ 2ನೆ ರವಿವಾರದಂದು ಮೊದಲ ಲೆಸ್ ಟ್ರಾಫಿಕ್ ಡೇ ಅಭಿಯಾನ ಆರಂಭವಾಗಲಿದ್ದು, ಮುಂದಿನ ಪೀಳಿಗೆಗೆ ಮಾಲಿನ್ಯ ರಹಿತ ಬೆಂಗಳೂರು ಉಳಿಸಲು ಈ ಅಭಿಯಾನ ಅನಿವಾರ್ಯ. ಮಾತ್ರವಲ್ಲ, ಸ್ವಂತ ವಾಹನಗಳನ್ನು ಬಳಸದೆ ಸಾಮೂಹಿಕ ಸಾರಿಗೆ ವಾಹನ ಬಳಸುವ ಮೂಲಕ ಮಾಲಿನ್ಯ ತಡೆಗಟ್ಟಲು ಜನ ಸಾಮಾನ್ಯರು ಮುಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬೆಂಗಳೂರು ನಗರಕ್ಕೆ ಶೀಘ್ರದಲ್ಲೆ 150 ಎಲೆಕ್ಟ್ರೀಕಲ್ ಬಸ್ ಸೇವೆ ಆರಂಭಿಸಲಿದ್ದು, ಬಿಎಂಟಿಸಿಯಿಂದ ಈಗಾಗಲೇ ಟೆಂಡರ್ ಕರೆಯಲಾಗಿದೆ. ಎಲೆಕ್ಟ್ರಿಕಲ್ ಬಸ್ ಕನಿಷ್ಟ 1.5 ಕೋಟಿ ರೂ.ನಿಂದ 2.5 ಕೋಟಿ ರೂ.ಗಳಾಗಿದ್ದು, ಕೇಂದ್ರ ಸರಕಾರದಿಂದ ಒಂದು ಬಸ್ಸಿಗೆ 1 ಕೋಟಿ ರೂ.ನಂತೆ 40 ಬಸ್ಸುಗಳಿಗೆ ಅನುದಾನ ನೀಡುವ ಭರವಸೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಸಾರಿಗೆ ಇಲಾಖೆ ಸಮಸ್ಯೆಗಳನ್ನು ಚರ್ಚಿಸಲು ಶೀಘ್ರದಲ್ಲೆ ದಕ್ಷಿಣ ರಾಜ್ಯಗಳ ಸಾರಿಗೆ ಸಚಿವರ ಸಭೆ ನಡೆಸಲು ನಿರ್ಧರಿಸಲಾಗಿದೆ. ದೇಶದಲ್ಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದ್ದು, 110ಕ್ಕೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ ಎಂದು ಅವರು ತಿಳಿಸಿದ್ದಾರೆ.







