ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ಕೇಂದ್ರ ಸರಕಾರ: ಕಾಂಗ್ರೆಸ್ ಆರೋಪ
ತೈಲೋತ್ಪನ್ನಗಳ ಮೇಲೆ ಅಬಕಾರಿ ಸುಂಕ

ಹೊಸದಿಲ್ಲಿ,ಜ.4: ಸರಕಾರವು ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ತಾನು ಗಳಿಸಿರುವ ಹೆಚ್ಚುವರಿ ಆದಾಯದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತಿಲ್ಲ ಎಂದು ಗುರುವಾರ ಆರೋಪಿಸಿರುವ ಕಾಂಗ್ರೆಸ್, ಸುಂಕ ಏರಿಕೆಯ ಮೂಲಕ ಸರಕಾರವು 5.5 ಲ.ಕೋ.ರೂ.ಗೂ ಅಧಿಕ ಮೊತ್ತವನ್ನು ಸಂಗ್ರಹಿಸಿದ್ದು, ಈ ಹಣವನ್ನು ಏನು ಮಾಡಿದ್ದೆ ಎನ್ನುವುದನ್ನು ಅದು ಜನತೆಗೆ ತಿಳಿಸಬೇಕಾಗಿದೆ ಎಂದು ಹೇಳಿದೆ.
ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯವನ್ನೆತ್ತಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಬಿಜೆಪಿಯು ಅಧಿಕಾರಕ್ಕೆ ಬರುವ ಎರಡು ತಿಂಗಳುಗಳ ಮೊದಲು ಅಂದರೆ 2014,ಮಾರ್ಚ್‌ನಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 110 ಡಾ.ಇತ್ತು ಮತ್ತು 2016 ಜೂನ್‌ನಲ್ಲಿ ಅದು 40 ಡಾ.ಗೆ ಇಳಿದಿತ್ತು. ಬುಧವಾರ ಈ ಬೆಲೆ 60 ಡಾ.ನಷ್ಟಿತ್ತು ಎನ್ನುವುದನ್ನು ಬೆಟ್ಟು ಮಾಡಿದರು.
ಇಳಿಯುತ್ತಿರುವ ಕಚ್ಚಾತೈಲ ಬೆಲೆಗಳಿಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಗ್ಗಿಸಲಾಗಿರಲಿಲ್ಲ, ಬದಲಿಗೆ ಅಬಕಾರಿ ಸುಂಕವನ್ನು ಡೀಸೆಲ್ ಮೇಲೆ ಶೇ.386 ಮತ್ತು ಪೆಟ್ರೋಲ್ ಮೇಲೆ ಶೇ.126ರಷ್ಟು ಹೆಚ್ಚಿಸಲಾಗಿತ್ತು ಎಂದ ಅವರು, ಸರಕಾರವು ವಾರ್ಷಿಕವಾಗಿ 1.62 ಲ.ಕೋ.ರೂ. ಮತ್ತು ಈವರೆಗೆ ಒಟ್ಟು 5.50 ಲ.ಕೋ.ರೂ.ಗಳನ್ನು ಗಳಿಸಿದೆ. ಜನತೆಗೆ ಈವರೆಗೆ ಯಾವುದೇ ಲಾಭ ತಲುಪಿಲ್ಲ ಮತ್ತು ಹೆಚ್ಚುವರಿ ಆದಾಯವು ಸರಕಾರದ ಬೊಕ್ಕಸವನ್ನು ಸೇರಿದೆ ಎಂದು ಹೇಳಿದರು.
ಲಾಭಗಳನ್ನು ಜನತೆಗೆ ತಲುಪಿಸುವ ಬದಲು ಸರಕಾರವು ದಲಿತರಿಗಾಗಿ ಮೀಸಲಾ ಗಿರುವ ಯೋಜನೆಗಳು ಸೇರಿದಂತೆ ಸಮಾಜ ಕಲ್ಯಾಣ ಯೋಜನೆಗಳ ಪ್ರಯೋಜನ ಗಳನ್ನು ಕಡಿತಗೊಳಿಸಿದೆ ಎಂದು ಪ್ರತಿಪಾದಿಸಿದ ಖರ್ಗೆ, ಯಾವ ಯೋಜನೆಯಡಿ ಈ ಹಣವನ್ನು ಬಳಸಲಾಗಿದೆ ಎನ್ನುವುದನ್ನು ಸರಕಾರವು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.