'ಕೈಕಂಬದ ಬಳಿ ಸಾರ್ವಜನಿಕ ಶೌಚಾಲಯಿಲ್ಲದೆ ಕಟ್ಟಡ ಕಾರ್ಮಿಕರು ಬಯಲಿನಲ್ಲಿಯೇ ಶೌಚ ಮಾಡುತ್ತಿದ್ದಾರೆ'
ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ
.jpg)
ಬಂಟ್ವಾಳ, ಜ. 4: ಬಿ.ಸಿ.ರೋಡಿನ ಕೈಕಂಬದ ಬಳಿ ಸಾರ್ವಜನಿಕ ಶೌಚಾಲಯಿಲ್ಲದೆ ವಿವಿಧೆಡೆಯಿಂದ ಕಟ್ಟಡ ಕಾರ್ಮಿಕರು ಬಯಲಿನಲ್ಲಿಯೇ ಶೌಚ ಮಾಡುತ್ತಿದ್ದಾರೆ. ಇದರಿಂದ ಈ ಪರಿಸರದಲ್ಲಿ ಅನಾರೋಗ್ಯ ವಾತಾವರಣ ಉಂಟಾಗಿದೆ ಎಂದು ಪುರಸಭಾ ಸದಸ್ಯ ಮುನೀಶ್ ಅಲಿ ಗಂಭೀರವಾಗಿ ಆರೋಪಿಸಿದ್ದಾರೆ.
ಪುರಸಭೆಯ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ನಗರ ಪ್ರದೇಶವಾಗಿ ಬೆಳೆಯುತ್ತಿರುವ ಕೈಕಂಬದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸುವಂತೆ ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ನಿರ್ಣಯಕೈಗೊಳ್ಳಲಾಗಿದೆ. ಆದರೆ ಇದುವರೆಗೂ ಶೌಚಾಲಯ ನಿರ್ಮಿಸಲು ಮುಂದಾಗಿಲ್ಲ. ಅಲ್ಲದೆ ಕಸ ಹಾಕಬೇಡಿ ಎಂದು ಫಲಕ ಅಳವಡಿಸಿದರೂ ಅಲ್ಲೇ ರಸ್ತೆಯ ಬದಿಯಲ್ಲಿ ಕಸ ಎಸೆದು ಹೋಗುತ್ತಾರೆ ಎಂದು ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗು ವುದು ಎಂದು ಭರವಸೆ ನೀಡಿದರು.
ಕಸ ಎಸೆಯುವವರ ಕುರಿತು ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡುವುದಾಗಿ ಹೇಳಿದ ಮೇಲೂ ಅವರ ವಿರುದ್ದವೇ ಪೊಲೀಸ್ ಠಾಣೆಗೆ ದೂರು ನೀಡಿದರೆ ಇನ್ನು ಮುಂದಕ್ಕೆ ಯಾರು ಮಾಹಿತಿ ನೀಡುತ್ತಾರೆ ಎಂದು ಸದಸ್ಯ ಗಂಗಾಧರ್ ಅಸಮಾಧಾನ ವ್ಯಕ್ತಪಡಿಸಿದರು.
ಬಿ.ಸಿ.ರೋಡಿನಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಈ ಬಗ್ಗೆ ಈ ಹಿಂದೆ ಹಲವು ಬಾರಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಕೈಕುಂಜೆ ರಸ್ತೆ ಬದಿ ವಾಹನ ಪಾರ್ಕಿಂಗ್‌ಗೆ ಅವಕಾಶ ಕಲ್ಪಿಸಿಕೊಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತಾದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ನಾಮನಿರ್ದೇಶಿತ ಸದಸ್ಯ ಲೋಕೇಶ್ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕೃತವಾಗಿ ನಾಲ್ಕು ಪಾರ್ಕಿಂಗ್‌ಗಳು ಮಾತ್ರ ಇದೆ. ಆದರೆ ಬಿ.ಸಿ.ರೋಡಿನಲ್ಲಿ ಅಲ್ಲಲ್ಲಿ ರಿಕ್ಷಾಪಾರ್ಕಿಂಗ್ ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದ ರಿಕ್ಷಾಗಳು ಇಲ್ಲಿಗೆ ಬರುವುದರಿಂದ ಪಾರ್ಕಿಂಗ್ ಸಮಸ್ಯೆ ಉಂಟಾಗುತ್ತಿದೆ ಎನ್ನುವ ದೂರುಗಳು ಸಭೆಯಲ್ಲಿ ಕೇಳಿ ಬಂತು.
ಟ್ರಾಫಿಕ್ ಪೊಲೀಸರ ಜೊತೆ ಈ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸುವ ಸಲಹೆಯಂತೆ ಸಂಚಾರಿ ಠಾಣೆಯ ಎಎಸೈ ಬಾಲಕೃಷ್ಣ ಗೌಡ ಅವರನ್ನು ಸಭೆಗೆ ಕರೆಸಿಕೊಳ್ಳಲಾಯಿತು. ಆದರೆ ಅದಾಗಲೇ ದೂರುದಾರ ಸದಸ್ಯ ಸದಾಶಿವ ಬಂಗೇರ ಸಹಿತ ಬಹುತೇಕ ಸದಸ್ಯರು ಸಭೆಯಿಂದ ನಿರ್ಗಮಿಸಿದ್ದುದರಿಂದ ಮುಂದಿನ ಸಭೆಯಲ್ಲಿ ಪಾರ್ಕಿಂಗ್ ಸಮಸ್ಯೆಗೆ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಧರಿಸಿಲಾಯಿತು.
ಕೇಸು ದಾಖಲಿಸಲು ನಿರ್ಧಾರ
ಕಳೆದ ಎರಡೂವರೆ ವರ್ಷದಿಂದ ಪುರಸಭಾ ಕಚೇರಿಯೊಳಗೆ ಕಾರ್ಯಚರಿಸುತ್ತಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ನಿಂದ ಬಾಡಿಗೆ ವಸೂಲಿ ಮಾಡದ ಬಗ್ಗೆ ಸದಸ್ಯ ಗೋವಿಂದ ಪ್ರಭು ಮುಖ್ಯಾಧಿಕಾರಿಯವರನ್ನು ತರಾಟೆಗೆ ತೆಗೆದು ಕೊಂಡರು. ಈಗಾಗಲೇ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದರೂ ಉತ್ತರಿಸಲಿಲ್ಲ. ಹಾಗಾಗಿ ಅವರ ಮೇಲೆ ಕೇಸು ದಾಖಲಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಾಧಿಕಾರಿ ರೇಖಾ ಶೆಟ್ಟಿ ಅವರು ಸಮಜಾಹಿಸಿಕೆ ನೀಡಿದರು.
ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ ಉಪಸ್ಥಿತರಿದ್ದರು. ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಸದಸ್ಯರಾದ ಬಿ.ಮೋಹನ್, ಇಕ್ಬಾಲ್ ಗೂಡಿನ ಬಳಿ, ಗಂಗಾಧರ, ಪ್ರವೀಣ್ ಬಿ. ಚಂಚಾಲಾಕ್ಷಿ, ಸಂಜೀವಿ, ವಸಂತಿ ಸಿ.ಚರ್ಚೆಯಲ್ಲಿ ಪಾಲ್ಗೊಂಡರು. ಸದಸ್ಯರಾದ ಭಾಸ್ಕರ್, ಸುಗುಣ ಕಿಣಿ, ಸಂಧ್ಯಾ, ಮುಮ್ತಾರ್, ಯಾಸ್ಮಿನ್ ಮತ್ತಿತರರು ಉಪಸ್ಥಿತರಿದ್ದರು.
ಪುರಸಭೆಯಲ್ಲಿ ಲೆಕ್ಕಪತ್ರಗಳು ಸರಿಯಿಲ್ಲ: ಆರೋಪ
ಪುರಸಭೆಯಲ್ಲಿ ಲೆಕ್ಕಪತ್ರಗಳು ಸರಿಯಾಗಿರುವುದಿಲ್ಲ ಎಂದು ವಿಪಕ್ಷ ಸದಸ್ಯ ದೇವದಾಸ್ ಶೆಟ್ಟಿ ಆರೋಪಿಸಿದರು. ಈ ಬಗ್ಗೆ ಅಂಕಿ ಅಂಶಗಳನ್ನು ನೀಡಿ 56 ಲಕ್ಷ ರೂ. ವ್ಯತ್ಯಾಸ ಇರುವುದಾಗಿ ತಿಳಿಸಿದ್ದಲ್ಲದೆ, ಈ ಹಣ ಯಾವ ಕೆಲಸಗಳಿಗೆ ಖರ್ಚಾಗಿದೆ ಎನ್ನುವ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು.
ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಯ ಅವ್ಯವಸ್ಥೆಯ ಬಗ್ಗೆ ಸದಸ್ಯರು ಕ.ನ.ನೀ.ಸ. ಮತ್ತು ಒಳಚರಂಡಿ ಮಂಡಳಿಯ ಎಂಜಿನಿಯರ್ ಶೋಭಾಲತಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಯೋಜನೆ ಪುರಸಭೆಗೆ ಹ್ತಸಾಂತರವಾಗುವ ಮೊದಲೆ ಇಷ್ಟು ಸಮಸ್ಯೆ ಎದುರಿಸುತ್ತಿದೆ. ಮುಂದಿನ ದಿನಗಳ ಸ್ಥಿತಿ ಹೇಗಿರಬಹುದು ಎಂದು ಪ್ರವೀಣ್ ಹಾಗೂ ಗಂಗಾಧರ ಎಂಜಿನಿಯರ್‌ನ್ನು ಪ್ರಶ್ನಿಸಿದರು.
ಶೀಘ್ರ ತೆರವು ಕಾರ್ಯಾಚರಣೆ
ಪುರಸಭಾ ವ್ಯಾಪ್ತಿಯ ಅಂಗಡಿಗಳ ಮುಂದೆ ಅನಧಿಕೃತವಾಗಿ ಶೀಟ್ ಅಳವಡಿಸಿರುವುದು ಹಾಗೂ ರಸ್ತೆಗೆ ತಾಗಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುವ ಅಂಗಡಿ ಹಾಗೂ ಗುಜರಿ ಅಂಗಡಿಗಳನ್ನು ತೆರವುಗೊಳಿಸಲು ಪುರಸಭೆಯ ಸಾಮಾನ್ಯ ಸಭೆ ನಿರ್ಣಯ ಕೈಗೊಂಡಿದ್ದು, ಶೀಘ್ರ ತೆರವು ಕಾರ್ಯಚರಣೆ ನಡೆಸಲು ತೀರ್ಮಾನಿಸಿದೆ.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಈ ಬಗ್ಗೆ ಪ್ರಸ್ತಾಪಿಸಿದ, ನಿರ್ಮಲ ಬಂಟ್ವಾಳ ಯೋಜನೆಗೆ ಅಡ್ಡಿಯಾಗುತ್ತಿರುವ ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ, ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಪಕ್ಕ ಅಂಗಡಿಗಳಿಗೆ ಅನಧಿಕೃತವಾಗಿ ಶೀಟ್ ಅಳವಡಿಸಿ ಸಾಮಾಗ್ರಿಗಳನ್ನು ಹೊರಗಡೆ ಇರಿಸಿಕೊಳ್ಳುತ್ತಿರುವುದು, ಗುಜರಿ ಅಂಗಡಿಗಳ ಸಾಮಾಗ್ರಿಗಳನ್ನು ಬೇಕಾ ಬಿಟ್ಟಿ ರಸ್ತೆ ಬದಿ ದಾಸ್ತನು ಇಟ್ಟುಕೊಳ್ಳುತ್ತಿರುವ ಬಗ್ಗೆ ಬರೆದಿರುವ ಪತ್ರ ಚರ್ಚೆಗೆ ಅವಕಾಶ ಮಾಡಿಕೊಟ್ಟಿತ್ತು.
ನಗರದ ಸೌಂದರ್ಯದ ದೃಷ್ಟಿಯಿಂದ ಪುರಸಭೆ ಈ ಕಾರ್ಯವನ್ನು ತಕ್ಷಣ ಮಾಡಬೇಕಿದೆ. ಈ ಬಗ್ಗೆ ನಿರ್ಲಕ್ಷ ವಹಿಸಿದ್ದಲ್ಲಿ ನ್ಯಾಯಲದ ಮೊರೆ ಹೋಗಿಯಾದರೂ ಕ್ರಮ ಜರುಗಿಸಲು ಪ್ರಯತ್ನಿಸುವುದಾಗಿ ಸದಾಶಿವ ಬಂಗೇರ ಎಚ್ಚರಿಸಿದರು. ಸದಸ್ಯರಾದ ಪ್ರವೀಣ್, ಗಂಗಾಧರ, ಶರೀಫ್, ಬಿ.ಮೋಹನ್ ಧ್ವನಿಗೂಡಿಸಿದರು. ಅಂಗಡಿಗಳ ಮುಂದಿನ ಶೀಟ್ ತೆರವುಗೊಳಿಸಲು ತಕ್ಷಣ ಕ್ರಮ ಜರುಗಿಸುವ ಬಗ್ಗೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ ನಿರ್ಣಯ ದಾಖಲಿಸಿಕೊಂಡರು.







