ಕಲ್ಮಾಡಿ ಚರ್ಚ್ ಉದ್ಘಾಟನೆ: ಆಕರ್ಷಕ ಹೊರೆಕಾಣಿಕೆ ಮೆರವಣಿಗೆ

ಉಡುಪಿ, ಜ.4: ನವೀಕರಣಗೊಂಡ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಉದ್ಘಾಟನೆಯ ಪ್ರಯುಕ್ತ ಪೂರ್ವಭಾವಿಯಾಗಿ ಬುಧವಾರ ಆಕರ್ಷಕ ಹೊರೆ ಕಾಣಿಕೆ ಮೆರವಣಿಗೆ ನಡೆಯಿತು.
ಮಲ್ಪೆಯ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬಳಿ ಹೊರೆಕಾಣಿಕೆ ಮೆರ ವಣಿಗೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವ ರಾಜ್, ಮಲ್ಪೆಸೌಹಾರ್ದತೆಯ ತಾಣವಾಗಿದ್ದು, ಕಲ್ಮಾಡಿಯ ನೂತನ ಚರ್ಚು ಬೋಟಿನ ಆಕೃತಿಯಲ್ಲಿ ಅತೀ ಸುಂದರವಾಗಿ ನಿರ್ಮಾಣಗೊಂಡಿದ್ದು ಮೀನು ಗಾರರ ಚರ್ಚು ಎಂಬ ಖ್ಯಾತಿಯನ್ನು ಹೊಂದಲಿ ಎಂದು ಶುಭ ಹಾರೈಸಿದರು.
ಉದ್ಯಮಿ ಜೆರ್ರಿ ವಿನ್ಸೆಂಟ್ ಡಾಯಸ್, ಚರ್ಚಿನ ಧರ್ಮಗುರು ವಂ.ಆಲ್ಬನ್ ಡಿಸೋಜ, ಅತಿಥಿ ಧರ್ಮಗುರುಗಳಾದ ವಂ.ವಲೇರಿಯನ್ ಡಿಸಿಲ್ವಾ, ವಂ. ರೆಜಿನಾಲ್ಡ್ ಪಿಂಟೊ, ವಂ.ಸ್ಟೀಫನ್, ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಹಾರ್ಮಿಸ್ ನೊರೊನ್ಹಾ, ನಗರಸಭಾ ಸದಸ್ಯ ನಾರಾಯಣ ಕುಂದರ್ ಉಪಸ್ಥಿತರಿದ್ದರು.
ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ ಸ್ವಾಗತಿಸಿ, ಕಾರ್ಯದರ್ಶಿ ಶೋಭಾ ಮೆಂಡೊನ್ಸಾ ವಂದಿಸಿದರು. ಲೆಸ್ಲಿ ಅರೋಜ ಕಾರ್ಯ ಕ್ರಮ ನಿರೂಪಿಸಿದರು. ಮೆರವಣಿಗೆಯಲ್ಲಿ ಚರ್ಚಿನ ಸದಸ್ಯರು, ಸ್ಥಳೀಯ ಚರ್ಚುಗಳ ಸದಸ್ಯರು, ಹಿಂದೂ ಭಾಂಧವರು ಆಗಮಿಸಿ ಹೊರೆಕಾಣಿಕೆಯನ್ನು ಸಮರ್ಪಿಸಿದರು. ಹೊರೆಕಾಣಿಕೆಯಲ್ಲಿ ಸ್ಥಳೀಯ ಚರ್ಚಿನ ತಂಡವು ಅರೇಬಿಕ್ ಸಮುದಾಯದ ಉಡುಗೆ ಧರಿಸಿ ಒಂಟೆಯೊಂದಿಗೆ ಆಗಮಿಸಿರುವುದು ಗಮನ ಸೆಳೆಯಿತು. ನಾಸಿಕ್ ಬ್ಯಾಂಡ್, ಹುಲಿವೇಷ, ಬೈಬಲ್ ಆದಾರಿತ ಟ್ಯಾಬ್ಲೊ ಗಳು, ಬ್ರಾಸ್‌ಬ್ಯಾಂಡ್, ಬೋಟನ್ನು ಹೋಲುವ ಅಲಂಕೃತ ವೆಲಂಕಣಿ ಮಾತೆಯ ವಾಹನ ಆಕರ್ಷಣೀಯವಾಗಿತ್ತು.







