‘ಕನ್ನಡ ಶಾಲೆಗಳ ಉಳಿವಿಗೆ ಪ್ರಾಮಾಣಿಕ ಕಾಳಜಿ ಅಗತ್ಯ’

ಉದ್ಯಾವರ, ಜ.4: ಇಂದು ಕನ್ನಡ ಮಾಧ್ಯಮ ಶಾಲೆಗಳು ಆತಂಕದಲ್ಲಿರಲು ಮುಖ್ಯ ಕಾರಣ ಹೆತ್ತವರ ಆಂಗ್ಲ ಮಾಧ್ಯಮದ ವ್ಯಾಮೋಹ ಹಾಗೂ ಕನ್ನಡ ಶಾಲೆಯನ್ನು ಉಳಿಸಿ ಬೆಳೆಸಲು ಪ್ರಾಮಾಣಿಕ ಕಾಳಜಿ ಮಾಡದ ಸಮಾಜ ವಾಗಿದೆ. ಮಕ್ಕಳ ಬಗ್ಗೆ ಕನಸು ಕಂಡು ಅದನ್ನು ಸಾಕಾರಗೊಳಿಸುವ ಆರೋಗ್ಯಕರ ಮನಸುಗಳ ಪ್ರಾಮಾಣಿಕ ಪ್ರಯತ್ನದಿಂದ ಮಾತ್ರ ಕನ್ನಡ ಶಾಲೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಕಾರ್ಕಳ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ.ಮಂಜುನಾಥ ಕೋಟ್ಯಾನ್ ಹೇಳಿದ್ದಾರೆ.
ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವರ್ಷದ ಹರ್ಷ- 157 ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಹೆತ್ತವರಿಗೆ ಕನ್ನಡ ಶಾಲೆಯ ಮೇಲೆ ನಂಬಿಕೆ ಹುಟ್ಟಿಸುವ ಕೆಲಸವನ್ನು ಕನ್ನಡ ಶಾಲೆಯ ಶಿಕ್ಷಕ ಮತ್ತು ಆಡಳಿತ ವರ್ಗ ಇಂದು ಮಾಡ ಬೇಕಾಗಿದೆ ಎಂದವರು ನುಡಿದರು.
ಮುಖ್ಯ ಅತಿಥಿಗಳಾಗಿ ಕಾಪು ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಪ್ರೊ.ವಿ.ಕೆ.ಉದ್ಯಾವರ್, ಬೆಂಗಳೂರು ಟಿಸಿಎಸ್ ಡೆಲಿವರಿ ಮೆನೇಜರ್ ಮತ್ತು ಸಂಸ್ಥೆ ಹಳೆವಿದಾ್ಯರ್ಥಿ ಶ್ರೀಶ ಆಚಾರ್ಯ ಭಾಗವಹಿಸಿದ್ದರು.
ವೇದಿಕೆಯಲ್ಲಿ ರಕ್ಷಕ-ಶಿಕ್ಷಕಸಂಘದ ಅಧ್ಯಕ್ಷೆ ಪೂರ್ಣಿಮಾ ದಿನೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್ ಕುಮಾರ್, ವಿದ್ಯಾರ್ಥಿ ನಾಯಕ ಅಕ್ಷಯ್ ಎಂ. ಭಟ್ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಗಣಪತಿ ಕಾರಂತ್ ಶಾಲಾ ವರದಿ ವಾಚಿಸಿದರು. ಹಿರಿಯ ಸಹ ಶಿಕ್ಷಕ ಮ್ಯಾಕ್ಸಿಮ್ ಡಿಸಿಲ್ವಾ ವಂದಿಸಿ ಸಹ ಶಿಕ್ಷಕಿ ರತ್ನಾವತಿ ಶ್ರೀಯಾನ್ ಕಾರ್ಯಕ್ರಮ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ವೈದೇಹಿ ಅವರ ಮಕ್ಕಳ ನಾಟಕ ‘ಸತ್ರು ಅಂದ್ರೆ ಸಾಯ್ತೆರ? (ನಿ. ಉದ್ಯಾವರ ನಾಗೇಶ್ ಕುಮಾರ್ ಮತ್ತು ಯಜ್ಞೇಶ್ವರ ಆಚಾರ್ಯ) ಹಾಗೂ ಮಾಯಾಪುರಿ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.







