ದಲಿತರ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿ: ಎಚ್.ಜಿ.ನಾಗಣ್ಣ

ಬೆಂಗಳೂರು, ಜ.4: ಮಹಾರಾಷ್ಟ್ರ ಕೋರೆಗಾಂವ್‌ನಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಮಹಾರಾಷ್ಟ್ರದ ಕೋರೆಂಗಾವ್ ಗ್ರಾಮದಲ್ಲಿ 200ನೆ ವರ್ಷದ ವಿಜಯೋತ್ಸವ ಆಚರಿಸುತ್ತಿದ್ದ ದಲಿತರ ಮೇಲೆ ಹಿಂದೂ ಏಕ್ತಾ ಮತ್ತು ಶಿವಾಜಿ ಪ್ರತಿಷ್ಠಾನ ಮುಖಂಡರ ಪ್ರಚೋದನೆಯಿಂದಾಗಿ ಹಿಂಸಾಚಾರ ನಡೆದಿದೆ. ಈ ಘಟನೆಯಲ್ಲಿ ಯುವಕನೊಬ್ಬ ಸಾವಿಗೀಡಾಗಿದ್ದಾನೆ. ಘಟನೆಯ ಹಿಂದೆ ಬಿಜೆಪಿ ಮತ್ತು ಸಂಘಪರಿವಾರದ ಕೈವಾಡವಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ದಲಿತ ಹಕ್ಕುಗಳ ಸಮಿತಿ ಮುಖಂಡ ಎಚ್.ಜಿ.ನಾಗಣ್ಣ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ದೇಶಾದ್ಯಂತ ಇಂತಹ ಅಮಾನವೀಯ ಕೃತ್ಯಗಳು ನಿರಂತರವಾಗಿ ನಡೆಯುತ್ತಿದ್ದು, ದಲಿತರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ದಲಿತರು ತಮ್ಮ ಹಾಗೂ ತಮ್ಮ ಸಮುದಾಯದವರ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೆ ತೀವ್ರತರಹದ ಹೋರಾಟಕ್ಕೆ ಸಿದ್ಧವಾಗಬೇಕೆಂದು ತಿಳಿಸಿದರು.
ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಬಂದಿದ್ದ ಕಾಲೇಜು ವಿದ್ಯಾರ್ಥಿಗಳ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಇಂತಹ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆಯು ವಿಫಲವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಎನ್.ರಾಜಣ್ಣ, ಎಂ.ಎಸ್.ಶಾರದಾ, ವೇಗಾನಂದ, ನಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.







