ಲಾಲು ಕಡೆಯ ವ್ಯಕ್ತಿಗಳು ದೂರವಾಣಿ ಕರೆಗಳನ್ನು ಮಾಡಿದ್ದರು: ನ್ಯಾ.ಸಿಂಗ್

ರಾಂಚಿ,ಜ.4: 950 ಕೋ.ರೂ.ಗಳ ಮೇವು ಹಗರಣದ ಎರಡನೇ ಪ್ರಕರಣದಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರನ್ನು ದೋಷಿಯೆಂದು ಘೋಷಿಸಿರುವ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್ ಸಿಂಗ್ ಅವರು ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟಣೆಯನ್ನು ಮತ್ತೊಮ್ಮೆ ಮುಂದೂಡಿದರು. ತನಗೆ ಲಾಲು ಕಡೆಯ ವ್ಯಕ್ತಿಗಳಿಂದ ದೂರವಾಣಿ ಕರೆಗಳು ಬಂದಿದ್ದವು ಎಂದು ಇದೇ ವೇಳೆ ಅವರು ನ್ಯಾಯಾಲಯದಲ್ಲಿ ತಿಳಿಸಿದರು. ಆದರೆ ಕರೆಗಳನ್ನು ಮಾಡಿದ್ದ ವ್ಯಕ್ತಿಗಳು ಯಾರೆಂದು ಅವರು ನಿರ್ದಿಷ್ಟವಾಗಿ ತಿಳಿಸಲಿಲ್ಲ.
ತನ್ಮಧ್ಯೆ ಪ್ರಕರಣದಲ್ಲಿ ದೋಷ ನಿರ್ಣಯವಾಗಿರುವ ಲಾಲು ಮತ್ತು ಇತರ 15 ಜನರಿಗೆ ಗರಿಷ್ಠ ಶಿಕ್ಷೆಯನ್ನು ವಿಧಿಸುವಂತೆ ಸಿಬಿಐ ವಕೀಲರು ನ್ಯಾಯಾಧೀಶರನ್ನು ಕೋರಿಕೊಂಡರು. ಪ್ರಕರಣವು 1990-94ರ ನಡುವೆ ಬಿಹಾರದ ದೇವಘರ ಜಿಲ್ಲಾ ಖಜಾನೆಯಿಂದ 84.5 ಲ.ರೂ.ಗಳನ್ನು ಅಕ್ರಮವಾಗಿ ಹಿಂದೆಗೆದುಕೊಂಡಿದ್ದಕ್ಕೆ ಸಂಬಂಧಿಸಿದೆ. ಶುಕ್ರವಾರ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಲಾಲು ಅವರು ದೋಷಿಯೆಂದು ನ್ಯಾಯಾಲಯವು ಕಳೆದ ವರ್ಷದ ಡಿ.23ರಂದು ಘೋಷಿಸಿದ್ದು, ಆಗಿನಿಂದಲೂ ಅವರು ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ. ಬುಧವಾರವೇ ಶಿಕ್ಷೆಯ ಪ್ರಮಾಣ ಪ್ರಕಟವಾಗಬೇಕಿತ್ತಾದರೂ ಇತ್ತೀಚಿಗೆ ನಿಧನರಾದ ಇಬ್ಬರು ವಕೀಲರ ಗೌರವಾರ್ಥ ಅದನ್ನು ಮುಂದೂಡಲಾಗಿತ್ತು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯದಲ್ಲಿ ಅಥವಾ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಕಟಿಸಬೇಕೇ ಎನ್ನುವುದನ್ನು ತಾನು ಶುಕ್ರವಾರ ನಿರ್ಧರಿಸುವುದಾಗಿ ನ್ಯಾ.ಸಿಂಗ್ ಹೇಳಿದಾಗ, ತಾನು ಖುದ್ದು ಹಾಜರಾತಿಯ ಪರವಾಗಿದ್ದೇನೆ ಎಂದು ತಿಳಿಸಿದ ಲಾಲು, ತನ್ನ ಬೆಂಬಲಿಗರು ನ್ಯಾಯಾಲಯದಲ್ಲಿ ಘೋಷಣೆಗಳನ್ನು ಕೂಗುವುದಿಲ್ಲ ಎಂದು ಭರವಸೆ ನೀಡಿದರು.