ಬೆಂಗಳೂರು: ಗಾಂಧಿವಾದಿ ಡಾ.ಹೊ.ಶ್ರೀನಿವಾಸಯ್ಯ ದತ್ತಿ ಉದ್ಘಾಟನೆ
ಬೆಂಗಳೂರು, ಜ.1: ಹಿರಿಯ ಗಾಂಧಿವಾದಿ ಡಾ.ಹೊ.ಶ್ರೀನಿವಾಸಯ್ಯ ಹೆಸರಿನಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಆರಂಭಿಸಿರುವ ದತ್ತಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.ಪಾಟೀಲ್ ಚಾಲನೆ ನೀಡಿದರು.
ಗುರುವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಹೊ.ಶ್ರೀನಿವಾಸಯ್ಯ ಚಾರಿಟಬಲ್ ಟ್ರಸ್ಟ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದತ್ತಿಯನ್ನು ಸಚಿವರು ಉದ್ಘಾಟನೆ ಮಾಡಿದರು.
ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಇಂದಿನ ಪೀಳಿಗೆಯ ಯುವ ಸಮುದಾಯ ಸಿನಿಮಾ ನಟ, ನಟಿಯರನ್ನು ನೋಡಿ ಆಕರ್ಷಿತರಾಗುವ ಬದಲಿಗೆ, ನಮಗೆ ಹೊ.ಶ್ರೀನಿವಾಸಯ್ಯರಂತಹವರು ಮಾದರಿಯಾಗಬೇಕು. ಎಲ್ಲವನ್ನು ಅರ್ಥ ಮಾಡಿಕೊಳ್ಳುವ, ಬದುಕಿನ ಬಗ್ಗೆ ತಿಳಿವಳಿಕೆ ನೀಡಿದ ಹಾಗೂ ಮುಂದಿನ ನಮ್ಮ ಬದುಕು ಯಶಸ್ಸಿನ ಕಡೆಗೆ ಸಾಗಬೇಕಾದರೆ ಹೊ.ಶ್ರೀನಿವಾಸಯ್ಯ ಮಾರ್ಗದರ್ಶಕರಾಗಬೇಕು ಎಂದರು.
ನಾನು ಹಾಗೂ ಹೊ.ಶ್ರೀನಿವಾಸಯ್ಯ ಪರಸ್ಪರ ಭೇಟಿಯಾಗಿ ಮಾತನಾಡಿದ ಪ್ರತಿಯೊಂದು ಕ್ಷಣದಿಂದಲೂ ಒಂದೊಂದು ಪಾಠ ಕಲಿತಿದ್ದೇನೆ. ಗಾಂಧಿಯನ್ನು ನಾನು ಮುಟ್ಟಿರಲಿಲ್ಲ. ಆದರೆ, ಗಾಂಧಿಯೊಂದಿಗೆ ಒಡನಾಟವಿದ್ದವರನ್ನು ಹತ್ತಿರದಿಂದ ಮಾತನಾಡಿದ್ದೆ, ಅವರ ಜೊತೆಗೆ ಸಂಬಂಧ ಬೆಳೆಸಿದ್ದೇನೆ ಎಂಬ ಹೆಮ್ಮೆ ಹೊ.ಶ್ರೀಯವರನ್ನು ನೋಡಿದ ತಕ್ಷಣ ನೆನಪಾಗುತ್ತಿತ್ತು ಎಂದು ಸ್ಮರಿಸಿಕೊಂಡರು.
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ವೌಲ್ಯಗಳು ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ ಗಾಂಧಿ ಹಾಗೂ ಅವರ ಹಾದಿಯಲ್ಲಿ ನಡೆದ ಹೊ.ಶ್ರೀ ಅವರ ವಿಚಾರಗಳನ್ನು ಸಮಾಜಕ್ಕೆ ತಿಳಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ತುಂಬಬೇಕು. ಜನಪರ ವೌಲ್ಯಗಳುಳ್ಳ ಮನೋಭಾವ ನಿರ್ಮಾಣ ಮಾಡಬೇಕು ಎಂದ ಅವರು, ಸ್ವಾತಂತ್ರ ಹೋರಾಟಗಾರ ಪಾಟೀಲ ಪುಟ್ಟಪ್ಪ ತಮ್ಮ ಇಳಿವಯಸ್ಸಿನಲ್ಲಿಯೂ ಗಾಂಧೀ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಅವರಿಂದ ಪ್ರತಿಯೊಬ್ಬರೂ ಪ್ರೇರಣೆ ಪಡೆಯಬೇಕು ಎಂದು ತಿಳಿಸಿದರು.
ಗಾಂಧಿ ಭವನ ನೀಡುವ ಪ್ರತಿಯೊಂದು ಸಲಹೆಯನ್ನು ಯಥಾವತ್ತಾಗಿ ನಮ್ಮ ಸರಕಾರ ಸ್ವೀಕಾರ ಮಾಡಲಿದ್ದು, ಅದಕ್ಕೆ ಎಷ್ಟು ಅನುದಾನ ಅಗತ್ಯವಿದ್ದರೂ ಅದನ್ನು ನೀಡಲಾಗುತ್ತದೆ. ಅಲ್ಲದೆ, ಮದ್ಯಪಾನ ಹೊರತುಪಡಿಸಿ ಉಳಿದೆಲ್ಲವನ್ನು ಸಂಪೂರ್ಣವಾಗಿ ಜಾರಿ ಮಾಡಲಾಗುತ್ತದೆ. ಮದ್ಯಪಾನ ನಿಷೇಧಿಸುವ ಸಂಬಂಧ ಕೆಲವು ತೊಡಕುಗಳಿದ್ದು, ಅದು ನಿವಾರಣೆಗೊಂಡ ನಂತರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಹೊ.ಶ್ರೀನಿವಾಸಯ್ಯ ಅಪರೂಪದ ಸರಳ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಬದುಕಿದ್ದಷ್ಟು ದಿನ ತಮ್ಮ ಹತ್ತಿರಕ್ಕೆ ಬಂದವರ ಜೊತೆ ಆದೇಶ ಪೂರ್ವಕವಾಗಿ ಪ್ರೀತಿಯ ಮಾತುಗಳನ್ನಾಡುತ್ತಿದ್ದರು. ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಿದ್ದ ಅವರು, ಸಾಯುವವರೆಗೂ ಎಲ್ಲಿಯೂ ತಪ್ಪದೇ ಪಾಲಿಸಿ ಸಾಧಿಸಿ ತೋರಿಸಿದ್ದಾರೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸ್ವಾತಂತ್ರ ಹೋರಾಟಗಾರ ಪಾಟೀಲ ಪುಟ್ಟಪ್ಪ, ಗಾಂಧಿ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ವೂಡೇ ಪಿ. ಕೃಷ್ಣ, ಗಾಂಧಿ ಸ್ಮಾರಕ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಮಾಜಿ ಶಾಸಕ ಬಿ.ಆರ್.ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್, ಎನ್ನೆಸ್ಸೆಸ್ ರಾಜ್ಯ ಸಂಯೋಜಕ ಗಣನಾಥಶೆಟ್ಟಿ ಸೇರಿದಂತೆ ಹಲವು ಪ್ರಮುಖ ಗಣ್ಯರು ಉಪಸ್ಥಿತರಿದ್ದರು.







