ಬೆಂಗಳೂರು: ವೇಶ್ಯಾವಾಟಿಕೆ ಜಾಲದಿಂದ ಯುವತಿಯರ ರಕ್ಷಣೆ
ಬೆಂಗಳೂರು, ಜ.4: ನಗರದ ಬಾಗಲೂರು ಬಳಿಯ ಕಾಡು ಸೊಣ್ಣಪ್ಪನಹಳ್ಳಿಯ ಗೋಲ್ಡ್‌ಲೈನ್ ಏರ್‌ಸಿಟಿ ಮತ್ತು ಗೋಲ್ಡಸ್ ಕ್ಲಬ್ ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ರವಿಕುಮಾರ್(31) ಹಾಗೂ ಸಿದ್ದರಾಜು(26) ಬಂಧಿತ ಆರೋಪಿಗಳಾಗಿದ್ದು, ಜಾರ್ಜ್ ಎಂಬ ಇನ್ನೊಬ್ಬ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಡು ಸೊಣ್ಣಪ್ಪನಹಳ್ಳಿಯ ಗೋಲ್ಡ್‌ಲೈನ್ ಏರ್‌ಸಿಟಿ, ಗೋಲ್ಡಸ್ ಕ್ಲಬ್ ರೆಸಾರ್ಟ್‌ನ ಮೊದಲನೇ ಮಹಡಿಯ ಕೊಠಡಿ ನಂ.106ರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಕಾರ್ಯಾಚರಣೆ ನಡೆಸಿ, ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿ, ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಹೊರರಾಜ್ಯದ ಯುವತಿಯನ್ನು ರಕ್ಷಿಸಿದ್ದಾರೆ.
ಆರೋಪಿಗಳಿಂದ ಎರಡು ಸ್ಯಾಮಸಂಗ್ ಮೊಬೈಲ್, ಒಂದು ಮೋಟರೋಲಾ ಮೊಬೈಲ್ ಫೋನ್ ಹಾಗೂ 3 ಸಾವಿರ ರೂ. ನಗದನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ತಪ್ಪಿಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯವನ್ನು ಮುಂದುವರಿಸಿದ್ದಾರೆ.





