ಬೆಂಗಳೂರು: ಅಧಿಕಾರಿ ವರ್ಗಾವಣೆಗೆ ಒತ್ತಾಯ
ಬೆಂಗಳೂರು,ಜ.4: ಬಿಬಿಎಂಪಿಯಲ್ಲಿ 10 ವರ್ಷಗಳಿಂದ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಟಿ.ಶೇಷಾದ್ರಿ ಅವರನ್ನು ಕೂಡಲೇ ಮಾತೃ ಇಲಾಖೆಗೆ ವರ್ಗಾಯಿಸಿ, ಮಾಹಿತಿ ತಂತ್ರಜ್ಞಾನದಲ್ಲಿ ಅನುಭವವಿರುವ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಬಿಬಿಎಂಪಿ ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ಒತ್ತಾಯಿಸಿದ್ದಾರೆ.
ಗುರುವಾರ ಬಿಬಿಎಂಪಿ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ. ಶೇಷಾದ್ರಿ ಅವರು ಮೂಲತಃ ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರ. ಅವರು ಸಾಫ್ಟ್‌ವೇರ್‌ನಲ್ಲಿ ಪರಿಣಿತಿ ಹೊಂದಿಲ್ಲ. ತಮ್ಮ ಪ್ರಭಾವದಿಂದ 2007ನೇ ಸಾಲಿನಲ್ಲಿ ಮಾಹಿತಿ ತಂತ್ರಜ್ಞಾನ ಸಲಹೆಗಾರರಾಗಿ ಎರವಲು ಸೇವೆ ಆಧಾರದ ಮೇಲೆ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನಿಯೋಜನೆಗೊಂಡಿದ್ದಾರೆ ಎಂದು ಹೇಳಿದರು.
2016ನೇ ಸಾಲಿನಲ್ಲಿ ಮಾತೃ ಇಲಾಖೆಗೆ ವಾಪಸ್ಸಾಗುವಂತೆ ಆದೇಶವಿದ್ದರೂ ಸಹ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸಲಹೆಗಾರ ಹುದ್ದೆಯಲ್ಲಿ ಕರ್ತವ್ಯ ಮುಂದುವರೆಸುತ್ತಿದ್ದಾರೆ ಎಂದು ದೂರಿದರು. ಕಳೆದ 10 ವರ್ಷಗಳಿಂದ ಶೇಷಾದ್ರಿ ಅವರು ಸ್ವತಂತ್ರವಾಗಿ ಹೊಸ ಸಾಫ್ಟ್‌ವೇರ್ ಅಭಿವದ್ಧಿಪಡಿಸುವ ಬದಲು ಖಾಸಗಿ ಕಂಪನಿಯಿಂದ ಖರೀದಿಸಿ ಪಾಲಿಕೆ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಬಿಎಂಪಿಯಲ್ಲಿ ಹಣಕಾಸು, ಕಾಮಗಾರಿ, ಆರೋಗ್ಯ, ಕಂದಾಯ, ಶಿಕ್ಷಣ, ಇತರೆ ಇಲಾಖೆಗಳು ಆನ್ ಲೈನ್‌ನಲ್ಲಿ ಹಣಕಾಸು ವಹಿವಾಟು ನಡೆಸುತ್ತವೆ. ಇಲಾಖೆಗಳಿಗೆ ಸಂಬಂಧಪಟ್ಟ ಪಾಸ್‌ವರ್ಡ್‌ಗಳು ಶೇಷಾದ್ರಿ ಬಳಿ ಇದ್ದು, ಪಾಲಿಕೆಯ ಪ್ರಸ್ತುತ ಹಣಕಾಸು ಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.
ಬಿಬಿಎಂಪಿಯಲ್ಲಿ ಸಮರ್ಥ ಮಾಹಿತಿ ತಂತ್ರಜ್ಞಾನ ಸಲಹೆಗಾರರನ್ನು ನಿಯೋಜಿಸಲು ಪತ್ರ ಬರೆಯಲಾಗಿದೆ. ತಮ್ಮ ಪ್ರಭಾವದಿಂದ ಅಧಿಕಾರಿ ನೇಮಕಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಬಿಎಂಪಿಯಲ್ಲಿ ವಲಯ, ಯೋಜನೆ ಇಲಾಖೆಗಳಿಗೆ ಎರವಲು ಸೇವೆ ಮೇಲೆ ನಿಯೋಜನೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಆಡಳಿತ ಜಂಟಿ ಆಯುಕ್ತರು ಆದೇಶಿಸಿದ್ದಾರೆ. ಆದೇಶದ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಶೇಷಾದ್ರಿ ಅವರನ್ನು ಕೂಡಲೇ ಅವರ ಮಾತೃ ಇಲಾಖೆಗೆ ವರ್ಗಾಯಿಸಬೇಕೆಂದು ನೇತ್ರಾ ನಾರಾಯಣ್ ಆಗ್ರಹಿಸಿದರು.







