ಎಐಎಡಿಎಂಕೆ, ದಿನಕರನ್‌ಗೆ ಕಮಲ್ ಹಾಸನ್ ತರಾಟೆ

ಚೆನ್ನೈ, ಜ. 4: ಇತ್ತೀಚೆಗೆ ತಮಿಳುನಾಡಿನ ಪ್ರತಿಷ್ಠಿತ ಆರ್‌ಕೆ ನಗರ ಉಪಚುನಾವಣೆಯಲ್ಲಿ ಮತದಾರರನ್ನು ಖರೀದಿಸಲು ದೊಡ್ಡ ಮೊತ್ತದ ಹಣ ನೀಡಿರುವ ಬಗ್ಗೆ ಆಡಳಿತಾರೂಢ ಎಐಎಡಿಎಂಕೆ ಹಾಗೂ ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ಅವರನ್ನು ನಟ ಕಮಲ್ ಹಾಸನ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ಘೋಷಿಸಿದ ದಿನಗಳ ಬಳಿಕ ಕಮಲ್ ಹಾಸನ್ ಈ ಹೇಳಿಕೆ ನೀಡಿದ್ದಾರೆ.
ತಮಿಳು ನಿಯತಕಾಲಿಕ ಆನಂದ ವಿಕಟನ್‌ನ ಕಾಲಂ ಒಂದರಲ್ಲಿ ಹಣದ ಶಕ್ತಿ ದುರ್ಬಳಕೆ ಮಾಡಿರುವ ಬಗ್ಗೆ ಕಮಲ್ ಹಾಸನ್ ಕಟು ಹೇಳಿಕೆ ನೀಡಿದ್ದಾರೆ. ಇದು ತಮಿಳುನಾಡು ರಾಜಕೀಯ ಹಾಗೂ ಪ್ರಭಾಪ್ರಭುತ್ವಕ್ಕೆ ಅವಮಾನ. ಇದು ಗೆಲುವನ್ನು ಖರೀದಿಸಿರುವುದು ಎಂದು ಅವರು ಹೇಳಿದ್ದಾರೆ. ಓಟಿಗಾಗಿ ನೋಟು ಅಪರಾಧದಲ್ಲಿ ಜನರು ಕೂಡ ಭಾಗಿಯಾಗಿರುವುದು ವಿಪರ್ಯಾಸ. ಆರ್‌ಕೆ ನಗರದ ಮತದಾರರು ತಮ್ಮ ಮತವನ್ನು 20 ರೂಪಾಯಿಗೆ ಮಾರಾಟ ಮಾಡಿರುವುದು ವಿಷಾದನೀಯ ಎಂದು ಕಮಲ್ ಹಾಸನ್ ಹೇಳಿದ್ದಾರೆ. ಕಮಲ ಹಾಸನ್ ಕೂಡ ರಾಜಕೀಯ ಪ್ರವೇಶಿಸುವ ಸಿದ್ಧತೆಯಲ್ಲಿದ್ದಾರೆ ಹಾಗೂ ತನ್ನ 63ನೇ ಜನ್ಮದಿನಾಚರಣೆ ಸಂದರ್ಭ ಭ್ರಷ್ಟಾಚಾರ ಹಾಗೂ ಅಧಿಕಾರಶಾಹಿಗಳ ಅಸಮರ್ಥತೆ ವಿರುದ್ಧ ಹೋರಾಟ ನಡೆಸಲು ಮೈಯಾಮ್ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದರು.





