ಕಾಂಗ್ರೆಸ್ ಕಾರ್ಯಕರ್ತರು ಯಾರೂ ಪಕ್ಷ ತೊರೆದಿಲ್ಲ: ಎನ್.ಜೆ.ರಾಜೇಶ್ ಸ್ಪಷ್ಟನೆ
ಮಂಡ್ಯ, ಜ.4: ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ ಮತ್ತು ಕೆ.ಸುರೇಶ್‍ಗೌಡ ಅವರ ಜತೆ ಯಾವುದೇ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹೋಗಿಲ್ಲ, ಕಾಂಗ್ರೆಸ್‍ನಲ್ಲೇ ಇದ್ದಾರೆ ಎಂದು ನಾಗಮಂಗಲ ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಹಾಗು ತಾಪಂ ಮಾಜಿ ಸದಸ್ಯ ಎನ್.ಜೆ.ರಾಜೇಶ್ ಸ್ಪಷ್ಟಪಡಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಸ್ಥಳೀಯ ಸಂಸ್ಥೆಗಳು, ಸಹಕಾರ ಸಂಸ್ಥೆಗಳು, ಗ್ರಾಪಂ ಚುನಾವಣೆಯಲ್ಲಿ ಗೆದ್ದವರು, ಪರಾಭವಗೊಂಡವರೆಲ್ಲರೂ ಕಾಂಗ್ರೆಸ್‍ನಲ್ಲೇ ಇದ್ದಾರೆ ಎಂದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಉತ್ತಮ ಆಡಳಿತ ಮತ್ತು ಪಕ್ಷದ ನಿಷ್ಠೆಯಿಂದ ಕಾಂಗ್ರಸ್‍ನಲ್ಲೇ ಇದ್ದೇವೆ. ಶಾಸಕ ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್‍ನಿಂದ ಯಾರಿಗೇ ಟಿಕೆಟ್ ನೀಡಿದರೂ ಬೆಂಬಲಿಸುತ್ತೇವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಹತ್ತು ಹಲವು ಉತ್ತಮ ಯೋಜನೆಗಳನ್ನು ಜನರಿಗೆ ಕೊಟ್ಟಿದ್ದು, ಈ ಬಗ್ಗೆ ಅರಿವು ಮೂಡಿಸುವ ಮೂಲಕ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರ್ಯಕರ್ತರು, ಮುಖಂಡರು ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.
ಕರಡಹಳ್ಳಿ ಗ್ರಾಪಂ ಅಧ್ಯಕ್ಷ ಮಹೇಶ್, ಭೀಮನಹಳ್ಳಿ ಗ್ರಾಪಂ ಅಧ್ಯಕ್ಷ ಜವರಾಯಿ, ಮುಖಂಡರಾದ ಈಶ್ವರಪ್ಪ, ಕೆ.ಬಜ್ಜೇಗೌಡ ಹಾಗು ಜಯರಾಮು ಬಿಂಡೇನಹಳ್ಳಿ ಉಪಸ್ಥಿತರಿದ್ದರು.







