ಬೆಂಗಳೂರು: ಬಿಎಂಟಿಸಿ ಬಸ್ ಸ್ವಚ್ಛಗೊಳಿಸಿ ಬಸ್ ದಿನ ಆಚರಣೆ

ಬೆಂಗಳೂರು, ಜ. 4: ಬಸ್ ದಿನದ ಅಂಗವಾಗಿ, ಬಿಎಂಟಿಸಿ ಬಸ್‌ಗಳನ್ನು ಸ್ವಚ್ಛಗೊಳಿಸುವ ಮೂಲಕ ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ್ ವಿನೂತನವಾಗಿ ಬಸ್ ದಿನ ಆಚರಿಸಿದರು.
ಗುರುವಾರ ನಗರದ ಡಿಪೋ ನಂ.2ರಲ್ಲಿ ಹಮ್ಮಿಕೊಂಡಿದ್ದ ಬಸ್ ದಿನದಲ್ಲಿ ಪಾಲ್ಗೊಂಡು ಬಸ್‌ಗಳನ್ನು ಶುಚಿಗೊಳಿಸಿದರು. ನಂತರ ಮಾತನಾಡಿದ ಅವರು, ಸಾರ್ವಜನಿಕ ಸಾರಿಗೆಯತ್ತ ಜನರನ್ನು ಸೆಳೆಯುವ ನಿಟ್ಟಿನಲ್ಲಿ, ಬಿಎಂಟಿಸಿ ಪ್ರತಿ ತಿಂಗಳ 4ನೇ ದಿನವನ್ನು ‘ಬಸ್ ದಿನ’ವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ನಗರದ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಒದಗಿಸುವ ಜತೆಗೆ ನಗರದ ಸಂಚಾರ ದಟ್ಟಣೆ ತಗ್ಗಿಸಿ, ಪರಿಸರವನ್ನು ಕಾಪಾಡುವುದು ಬಸ್ ದಿನ ಆಚರಣೆಯ ಉದ್ದೇಶವಾಗಿದೆ. ಕಳೆದ 8 ವರ್ಷಗಳಿಂದ ಬಸ್‌ದಿನ ಆಚರಿಸಿಕೊಂಡು ಬರಲಾಗುತ್ತಿದ್ದು, ಇಂಧನ ಉಳಿತಾಯ, ಪರಿಸರ ಮಾಲಿನ್ಯ ನಿಯಂತ್ರಣ ಹಾಗೂ ಸಂಚಾರ ದಟ್ಟಣೆ ತಗ್ಗಿಸಲು ಅನುಸರಿಸಬೇಕಾದ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.
96ನೇ ಬಸ್ ದಿನದ ಅಂಗವಾಗಿ ಬಸ್‌ಗಳ ಸ್ವಚ್ಛತೆಗೆ ಒತ್ತು ನೀಡಲಾಗಿದೆ ಎಂದ ಅವರು, ಬಿಎಂಟಿಸಿ ಘಟಕಗಳ ಉಸ್ತುವಾರಿ ಅಧಿಕಾರಿಗಳು, ವಿಭಾಗೀಯ ನಿಯಂತ್ರಣಾಧಿಕಾರಿಗಳು, ವಿಭಾಗೀಯ ಸಂಚಾರ ಅಧಿಕಾರಿಗಳು, ವಿಭಾಗೀಯ ತಾಂತ್ರಿಕ ಅಭಿಯಂತರರು, ತಮ್ಮ ವ್ಯಾಪ್ತಿಯಲ್ಲಿ ಬರುವ ಘಟಕಗಳಿಗೆ ಭೇಟಿ ನೀಡಿ ಬಸ್‌ಗಳನ್ನು ಸ್ವಚ್ಛಗೊಳಿಸಿ ಆಚರಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ನಾಗರಾಜ ಯಾದವ್ ಹೇಳಿದರು.
ಈ ಸಂದರ್ಭದಲ್ಲಿ ಡಾ.ಎ.ಎನ್. ಪ್ರಕಾಶ್ ಗೌಡ, ಸೇರಿದಂತೆ ಬಿಎಂಟಿಸಿ ನಿರ್ದೇಶಕರು, ಅಧಿಕಾರಿ ಭಾಗವಹಿಸಿದ್ದರು.







