ಬೆಂಗಳೂರು: ಜ.19ರಿಂದ ನಿರ್ಮಾಣ ಕ್ಷೇತ್ರದ ಸಮ್ಮೇಳನ

ಬೆಂಗಳೂರು, ಜ. 4: ಭಾರತದ ಆರ್ಥಿಕತೆಗೆ ದೀರ್ಘಾವಧಿ ಕೊಡುಗೆ ನೀಡುವ ನಿರ್ಮಾಣ ಕ್ಷೇತ್ರದ ಸಮಸ್ಯೆಗಳ ಚರ್ಚೆ ಮತ್ತು ಪರಿಹಾರದ ದೃಷ್ಟಿಯಿಂದ ಜ.19ರಿಂದ ಮೂರು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಅಖಿಲ ಭಾರತ ಬಿಲ್ಡರ್ಸ್ ಸಮ್ಮೇಳನವನ್ನು ಏರ್ಪಡಿಸಲಾಗಿದೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಬಿಲ್ಡರ್ಸ್ ಅಸೋಸಿಯೇಷನ್ ರಾಷ್ಟ್ರೀಯಾಧ್ಯಕ್ಷ ಎಚ್.ಎನ್.ವಿಜಯ ರಾಘವ ರೆಡ್ಡಿ, ಈ ಸಮ್ಮೇಳನಕ್ಕೆ ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಚಾಲನೆ ನೀಡಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ದೇಶದ ಜಿಡಿಪಿಗೆ ಪ್ರಮುಖ ಕೊಡುಗೆದಾರರಾಗಿರುವ 35 ಮಿಲಿಯನ್‌ಗೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಈ ವಲಯಕ್ಕೆ ಎಫ್‌ಡಿಐ ಆಕರ್ಷಿಸುತ್ತಿದ್ದು, ದೇಶದ ಮೂಲಸೌಕರ್ಯ ಅಭಿವೃದ್ಧಿಯನ್ನು ಸರಳಗೊಳಿಸಿದೆ. ನಿರ್ಮಾಣ ಕ್ಷೇತ್ರದ ಸಮಸ್ಯೆಗಳ ನಿವಾರಣೆಗೆ ಸರಕಾರಗಳು ಆಸ್ಥೆ ವಹಿಸಬೇಕು ಎಂದು ಆಗ್ರಹಿಸಿದರು.
ನಿರ್ಮಾಣ ವಲಯಕ್ಕೆ ವಿಧಿಸಿರುವ ಶೇ.18ರಷ್ಟು ಜಿಎಸ್ಟಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಕ್ಕೆ ವಿಧಿಸಿರುವ ಶೇ.18ರ ಜಿಎಸ್ಟಿಯಲ್ಲಿ ಶೇ.6ರಷ್ಟು ಭೂಮಿ ಮೌಲ್ಯವನ್ನು ಆಧರಿಸಿದ್ದು, ಅದನ್ನು ಕಡಿತಗೊಳಿಸಬೇಕೆಂಬುದು ಸೇರಿ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬಿ.ಸೀನಯ್ಯ, ಭೀಷ್ಮ ಆರ್.ರಾಧಾಕೃಷ್ಣನ್ ಉಪಸ್ಥಿತರಿದ್ದರು.







