ಗಾಂಜಾ ಮಾರಾಟ: 9 ಜನರ ಬಂಧನ
ಶಿವಮೊಗ್ಗ, ಜ. 4: ಜಿಲ್ಲೆಯ ಭದ್ರಾವತಿ ಪಟ್ಟಣದ ವಿವಿಧೆಡೆ ಡಿ.ಸಿ.ಬಿ. ಪೊಲೀಸ್ ತಂಡವು ಸ್ಥಳೀಯ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ ಗಾಂಜಾ ಮಾರಾಟಗಾರರಿಬ್ಬರು ಸೇರಿದಂತೆ 9 ಜನರನ್ನು ಬಂಧಿಸಿದ ಘಟನೆ ವರದಿಯಾಗಿದೆ. ಇದೇ ವೇಳೆ ಗಾಂಜಾ ಖರೀದಿಸಿ ಸೇವಿಸುತ್ತಿದ್ದವರನ್ನು ಪತ್ತೆ ಹಚ್ಚಿ ಕೇಸ್ ದಾಖಲಿಸಿಕೊಂಡು, ವ್ಯಸನಿಗಳಿಗೆ ಚುರಕು ಮುಟ್ಟಿಸುವ ಕೆಲಸ ಮಾಡಿದೆ.
ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಅಬ್ದುಲ್ ಖಾದರ್, ಭದ್ರಾವತಿಯ ಸುರೇಶ್ ಬಂಧಿತ ಅಂತರ್‍ಜಿಲ್ಲಾ ಗಾಂಜಾ ಮಾರಾಟಗಾರರಾಗಿದ್ದಾರೆ. ಮತ್ತೋರ್ವ ಆರೋಪಿ ದಾವಣಗೆರೆ ಜಿಲ್ಲೆ ಬಸವಾಪಟ್ಟಣದ ಹಾಲೇಶ್ ಎಂಬುವನು ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಉಳಿದಂತೆ ಭದ್ರಾವತಿಯ ನಿವಾಸಿಗಳಾದ ಮಂಜ, ರಿಯಾಜ್, ಹೈದರಾಲಿ, ಮಹಮ್ಮದ್ ಇರ್ಫಾನ್, ಫಿರ್ದೋಸ್, ಜಾವೇದ್, ಅಜ್ಜು ಎಂಬುವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ ಒಂದೂವರೆ ಕೆ.ಜಿ. ತೂಕದ ಗಾಂಜಾ, 50 ಗಾಂಜಾ ಪೌಚ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಡಿಸಿಬಿ ಇನ್ಸ್ ಪೆಕ್ಟರ್ ಕುಮಾರ್, ಭದ್ರಾವತಿ ನಗರ ಇನ್ಸ್ ಪೆಕ್ಟರ್ ಚಂದ್ರಶೇಖರ್, ಹಳೇ ನಗರ ಠಾಣೆ ಪಿಎಸ್‍ಐ ಶಿವಪ್ರಸಾದ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ. ಈ ಸಂಬಂಧ ಶಿವಮೊಗ್ಗ ಡಿ.ಸಿ.ಬಿ. ಪೊಲೀಸ್ ಠಾಣೆ ಹಾಗೂ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವ್ಯಸನಿಗೆ ಶಾಸ್ತಿ: ಇಷ್ಟು ದಿನ ಪೊಲೀಸರು ಗಾಂಜಾ ಮಾರಾಟಗಾರರು, ಪೂರೈಕೆದಾರರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದರು. ಇದೀಗ ಗಾಂಜಾ ಸೇವನೆ ಮಾಡುವ ವ್ಯಸನಿಗಳ ವಿರುದ್ದವೂ ಕಾನೂನು ರೀತಿಯ ಕ್ರಮ ಜರುಗಿಸಲಾರಂಭಿಸಿದ್ದಾರೆ. ಭದ್ರಾವತಿಯಲ್ಲಿ ನಡೆಸಿದ ದಾಳಿಯ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ವ್ಯಸನಿಗಳನ್ನು ಗುರುತಿಸಿ ಅವರ ವಿರುದ್ದವೂ ಪೊಲೀಸರು ಕಾನೂನು ರೀತಿಯ ಕೇಸ್ ಹಾಕಿದ್ದಾರೆ. ಈ ಮೂಲಕ ವ್ಯಸನಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.







