‘ಮಾಜಿ ಸಚಿವರು ಸರಕಾರಿ ಬಂಗ್ಲೆಗಳಲ್ಲಿ ಉಳಿದುಕೊಳ್ಳುವಂತಿಲ್ಲ’

ಹೊಸದಿಲ್ಲಿ, ಜ. 4: ಮಾಜಿ ಸಚಿವರು ಸರಕಾರಿ ಬಂಗ್ಲೆಗಳಲ್ಲಿ ಹೆಚ್ಚು ಕಾಲ ಉಳಿದುಕೊಳ್ಳುವಂತಿಲ್ಲ ಎಂದು ನ್ಯಾಯಾಂಗದ ಸಲಹೆಗಾರ ಗೋಪಾಲ್ ಸುಬ್ರಹ್ಮಣಿಯಂ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದಾರೆ. ಸರಕಾರಿ ಬಂಗ್ಲೆಗಳಲ್ಲಿ ಮಾಜಿ ಸಚಿವರಿಗೆ ಪ್ರವೇಶ ನೀಡುವ ಉತ್ತರಪ್ರದೇಶದ ಕಾನೂನಿನಲ್ಲಿರುವ ಅವಕಾಶದ ಬಗ್ಗೆ ನ್ಯಾಯಾಲಯ ಪರಿಶೀಲಿಸುತ್ತಿದೆ.
ಸರಕಾರಿ ಬಂಗ್ಲೆಗಳಲ್ಲಿರುವ ಮಾಜಿ ಮುಖ್ಯಮಂತ್ರಿಗಳನ್ನು ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ 2016 ಆಗಸ್ಟ್‌ನಲ್ಲಿ ಸರಕಾರಿ ಅಧಿಕಾರಿಗಳಿಗೆ ನಿರ್ದೇಶಿಸಿತ್ತು. ಆದರೆ, ಈ ಆದೇಶ ಅನುಷ್ಠಾನಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರಪ್ರದೇಶ ಮೂಲದ ಸರಕಾರೇತರ ಸಂಸ್ಥೆ ಲೋಕಪ್ರಹಾರಿ ಕೋರಿತ್ತು. ಮಾಜಿ ಸಚಿವರನ್ನು ಸರಕಾರಿ ಬಂಗಲೆಗಳಲ್ಲಿ ಅನಿರ್ಧಿಷ್ಟಾವದಿ ಉಳಿಸಿಕೊಳ್ಳಲು ಸಂವಿಧಾನದ ಕಲಂ 14 ಅವಕಾಶ ನೀಡುತ್ತದೆಯೇ ಎಂದು ನ್ಯಾಯಮೂರ್ತಿ ರಂಜನ್ ಗಗೋಯ್ ಹಾಗೂ ಆರ್. ಭಾನುಮತಿ ಅವರನ್ನೊಳಗೊಂಡ ಪೀಠದ ಮುಂದೆ ಹಾಜರಾದ ಸುಬ್ರಹ್ಮಣೀಯಂ ಹೇಳಿದರು. ನ್ಯಾಯಾಲಯ ಈಗ ಮಧ್ಯಪ್ರವೇಶಿಸಬೇಕು ಇಲ್ಲದಿದ್ದರೆ, ಈ ಅಭ್ಯಾಸ ಇತರ ರಾಜ್ಯಗಳಲ್ಲೂ ವಿಸ್ತರಿಸಬಹುದು ಎಂದು ಎನ್‌ಜಿಒ ಪರವಾಗಿ ಎಸ್.ಎನ್. ಶುಕ್ಲಾ ಹೇಳಿದರು. ಮಾಜಿ ಸಚಿವರಿಗೆ ರಾಜ್ಯ ಬಂಗ್ಲೆ ಮಾತ್ರ ನೀಡುವುದಿಲ್ಲ. ಕಾರು ಹಾಗೂ ಸಿಬ್ಬಂದಿಯನ್ನು ಕೂಡ ನೀಡುತ್ತದೆ. ಇದಕ್ಕೆ ಸರಕಾರದ ಬೊಕ್ಕಸದಿಂದ ಹಣ ವಿನಿಯೋಗಿಸಲಾಗುತ್ತಿದೆ ಎಂದು ಅವರು ಹೇಳಿದರು.