ಯುವಕನ ಹತ್ಯೆ: ಕೋಸೌವೇ ಖಂಡನೆ
ಉಡುಪಿ, ಜ.4: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಸುರತ್ಕಲ್- ಕಾಟಿಪಳ್ಳದಲ್ಲಿ ನಡೆದಿರುವ ದೀಪಕ್ ರಾವ್ ಹತ್ಯೆಯನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ತೀವ್ರವಾಗಿ ಖಂಡಿಸಿದೆ. ಇದರ ಬೆನ್ನಿಗೆ ನಡೆಯುತ್ತಿರುವ ಕೋಮು ಹಿಂಸಾಚಾರವನ್ನು ತಡೆಯಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ಈಗಾಗಲೇ ಕರಾವಳಿಯಲ್ಲಿ ನಡೆಯುತ್ತಿರುವ ಅನೇಕ ಕಾನೂನು ಭಂಜಕ - ಕೋಮು ಆಧಾರಿತ ವಿದ್ಯಮಾನಗಳಿಂದ ಪ್ರಕ್ಷುಬ್ಧವಾಗಿರುವ ವಾತಾವರಣಕ್ಕೆ ಇಂತಹ ಕೃತ್ಯಗಳು ಮಾರಕವಾಗಿವೆ. ಧರ್ಮ ರಕ್ಷಣೆ - ಮೂಲಭೂತವಾದಿತನದ ಇಂತಹ ಕೃತ್ಯಗಳ ಬಗ್ಗೆ ದಕ್ಷಿಣಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಉದಾಸೀನ ತೋರದೆ ಕಟ್ಟುನಿಟ್ಟಿನ ಕ್ರಮ ಕೈಗೊ ಳ್ಳಬೇಕೆಂದು ವೇದಿಕೆ ಆಗ್ರಹಿಸಿದೆ.
ಈ ಕುಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿತರನ್ನು ಶೀಘ್ರವೇ ಬಂಧಿಸಿರುವ ಕ್ರಮವನ್ನು ವೇದಿಕೆ ಸ್ವಾಗತಿಸಿದೆ. ಹಂತಕರನ್ನು ತೀವ್ರವಾಗಿ ವಿಚಾರಣೆ ಗೊಳಪಡಿಸಿ, ಇದರ ಹಿಂದಿರುವ ಸಂಚನ್ನು ಬಯಲಿಗೆ ತರಬೇಕು ಹಾಗೂ ಹಂತಕರಿಗೆ ಕಾನೂನಿನ ಶಿಕ್ಷೆಯನ್ನು ವಿಧಿಸಲು ಸೂಕ್ತ ಕಾನೂನು ಕ್ರಮ ಜರಗಿಸಬೇಕೆಂದು ವೇದಿಕೆಯು ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದೆ.





