ತರಾತುರಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯ: ವಾಹನ ಸಂಚಾರಕ್ಕೆ ಅಡ್ಡಿ

ಮೂಡಿಗೆರೆ, ಜ.4: ಹಳೇಮೂಡಿಗೆರೆ ಸಮೀಪ ಹದಗೆಟ್ಟಿರುವ ಕೆ.ಎಂ.ರಸ್ತೆಯ ಗುಂಡಿಗಳನ್ನು ಗುರುವಾರ ಇದ್ದಕ್ಕಿದ್ದಂತೆ ಮುಚ್ಚುವ ಕಾರ್ಯ ನಡೆಸಿದ್ದರಿಂದ ಕೆಲಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿ ಅರ್ಧ ತಾಸಿಗೂ ಹೆಚ್ಚು ಕಾಲ ವಾಹನಗಳು ಚಲಿಸಲಾಗದೆ ಪ್ರಯಾಣಿಕರು ತೊಂದರೆ ಅನುಭವಿಸಿದ್ದರಲ್ಲದೆ ಒಂದು ಆಂಬುಲೆನ್ಸ್ ಕೂಡ ಟ್ರಾಫಿಕ್ ಜಾಮ್‍ನಲ್ಲಿ ಸಿಕ್ಕಿಹಾಕಿಕೊಂಡು ಪರದಾಡುವಂತಾಯಿತು.
ಸಿಎಂ ಸಿದ್ದರಾಮಯ್ಯ ಮೂಡಿಗೆರೆಗೆ ಆಗಮಿಸುವ ಹಿನ್ನೆಲೆಯಲ್ಲಿ ಗುರುವಾರ ತರಾತುರಿಯಲ್ಲಿ ಗುಂಡಿ ಮುಚ್ಚುವ ಕಾರ್ಯ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ರಸ್ತೆ ದುರಸ್ತಿ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿ, ಟ್ರಾಫಿಕ್ ಮಧ್ಯೆ ಮಂಗಳೂರು ಕಡೆಗೆ ಹೋಗುವ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಸಿಕ್ಕಿಹಾಕಿಕೊಂಡಿದ್ದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದುದು ಕಂಡುಬಂತು.
‘ರಸ್ತೆ ದುರಸ್ತಿ ಕಾಮಗಾರಿ ಮಾಡುವಾಗ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು’
-ರಫೀಕ್ ಭಾರತಿಬೈಲು.





