ಪ್ರಾಥಮಿಕ ಹಂತದಲ್ಲಿ ಶಾಲೆ ಬಿಟ್ಟ ಮಕ್ಕಳ ಪ್ರಮಾಣ ಶೇ.4.13 : ಜಾವಡೇಕರ್

ಹೊಸದಿಲ್ಲಿ, ಜ.4: ದೇಶದಲ್ಲಿ 2014-15ರಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಣದ ಮಧ್ಯದಲ್ಲೇ ಶಾಲೆ ಬಿಟ್ಟ ಮಕ್ಕಳ ಪ್ರಮಾಣ ಶೇ.4.13ರಷ್ಟಾಗಿದೆ ಎಂದು ಕೇಂದ್ರ ಮಾನವಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಈ ಬಗ್ಗೆ ಮಾಹಿತಿ ಒದಗಿಸಿದ ಸಚಿವರು, 2014-15ರಲ್ಲಿ ಮಧ್ಯದಲ್ಲೇ ಶಾಲೆ ಬಿಟ್ಟ ಮಕ್ಕಳಲ್ಲಿ ಬಾಲಕರ ಪ್ರಮಾಣ ಶೇ.4.36, ಬಾಲಕಿಯರ ಪ್ರಮಾಣ ಶೇ.3.88 ಆಗಿದೆ. ಉನ್ನತ ಪ್ರಾಥಮಿಕ ಶಾಲೆಯಲ್ಲಿ ಮಧ್ಯದಲ್ಲೇ ಶಾಲೆ ಬಿಟ್ಟವರ ಪ್ರಮಾಣ(2014-15ರಲ್ಲಿ) ಶೇ.4.03 ಆಗಿದ್ದರೆ, ಮಾಧ್ಯಮಿಕ ಶಾಲಾ ಹಂತದಲ್ಲಿ ಶಾಲೆ ಬಿಟ್ಟವರ ಪ್ರಮಾಣ ಶೇ.17.06 ಆಗಿದೆ. 9ನೇ ತರಗತಿಯಲ್ಲಿ ಅತ್ಯಧಿಕ ಮಕ್ಕಳು ಶಾಲೆ ಬಿಡುತ್ತಾರೆ. ವಿದ್ಯಾರ್ಥಿಗಳನ್ನು ನಪಾಸು ಮಾಡುವಂತಿಲ್ಲ ಎಂಬ ನಿಯಮದಂತೆ 9ನೇ ತರಗತಿಯವರೆಗೆ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ 10ನೇ ತರಗತಿಯ ಪರೀಕ್ಷೆಯ ಭಯ ಕಾಡುವುದು ಇದಕ್ಕೆ ಕಾರಣ ಎಂದು ಸಚಿವರು ತಿಳಿಸಿದರು.
ದೇಶದ ಹೆಚ್ಚಿನ ಶಾಲೆಗಳು ಈಗ ‘ಮಧ್ಯಾಹ್ನದ ಊಟದ ಕೇಂದ್ರ’ಗಳಾಗಿದ್ದು ವಿದ್ಯಾರ್ಥಿಗಳು ಶಾಲೆಗೆ ಬರುವುದು ಮಧ್ಯಾಹ್ನ ಊಟಕ್ಕಾಗಿ ಮಾತ್ರ ಎಂಬಂತೆ ಆಗಿಬಿಟ್ಟಿದೆ. ನಪಾಸಾಗುವ ಭಯವಿಲ್ಲದ ಕಾರಣ ಇವರು ಕಲಿಯುವ ಗೋಜಿಗೇ ಹೋಗುವುದಿಲ್ಲ. ಈ ಸಮಸ್ಯೆ ಪರಿಹರಿಸಲು ಒಂದು ಶಿಕ್ಷಣ ಪದ್ದತಿಯನ್ನು ರೂಪಿಸಲಾಗಿದ್ದು 15 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಾಗಿದೆ ಎಂದು ಜಾವಡೇಕರ್ ತಿಳಿಸಿದ್ದಾರೆ.