ಹಾಲಿನ ದರ ಕಡಿತ ಹಿಂಪಡೆಯದಿದ್ದರೆ ಉಗ್ರ ಪ್ರತಿಭಟನೆ: ಕೆ.ಎಸ್.ಪುಟ್ಟಣ್ಣಯ್ಯ ಎಚ್ಚರಿಕೆ
ಮಂಡ್ಯ, ಜ.4: ಮನ್‍ಮುಲ್ ಹಾಲಿನ ದರ ಕಡಿತಗೊಳಿಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ, ರೈತಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ, ವಾರದೊಳಗೆ ನಿರ್ಧಾರ ಹಿಂಪಡೆಯದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನ್‍ಮುಲ್ ಆಡಳಿತ ಮಂಡಳಿ ಕೆಲವು ದಿನಗಳ ಹಿಂದೆ 2 ರೂ. ಕಡಿತಗೊಳಿಸಿರುವುದು ಸೇರಿದಂತೆ ಈ ವರ್ಷ 5 ರೂ. ಕಡಿತಗೊಳಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.
2017ರ ಆರಂಭದಲ್ಲಿ ಲೀಟರ್ ಹಾಲಿಗೆ 26.50 ರೂ. ನೀಡುತ್ತಿದ್ದು, ಪ್ರಸ್ತುತ 21.50 ರೂ.ಗೆ ಇಳಿಸಲಾಗಿದೆ. ಜೋಳದ ಉತ್ಪಾದನೆ ಹೆಚ್ಚಳದಿಂದಾಗಿ ಪಶು ಆಹಾರದ ದರವನ್ನು ಕೇವಲ 90 ರೂ. ಇಳಿಕೆಯಾಗಿದೆ. ಇದನ್ನೇ ನೆಪಮಾಡಿಕೊಂಡು ಹಾಲಿನ ದರ ಕಡಿತಗೊಳಿಸಿರುವುದು ಸರಿಯಲ್ಲ ಎಂದು ಅವರು ಹೇಳಿದರು.
2013ರಲ್ಲಿ ಎಕರೆ ಹುಲ್ಲಿನ ಬೆಲೆ 4,000 ರೂ.ಗಳಿದ್ದು, ಈಗ 16 ಸಾವಿರ ರೂ.ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಸು ಸಾಕಾಣೆ ಬಹಳ ಕಷ್ಟವಾಗಿದೆ. ಆದ್ದರಿಂದ ದರ ಕಡಿತ ಹಿಂಪಡೆಯಲು ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುತ್ತೇವೆ. ಸ್ಪಂದಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಅವರು ತಿಳಿಸಿದರು.
ರಾಗಿ, ಉದ್ದು, ಹೆಸರು, ತೊಗರಿ ಉತ್ಪಾದನೆ ಹೆಚ್ಚಳದಿಂದ ಬೆಲೆ ತೀವ್ರ ಕುಸಿತವಾಗಿದ್ದು, ಸರಕಾರ ಬೆಂಬಲ ಬೆಲೆ ನಿಗದಿಪಡಿಸಬೇಕು. ರಾಗಿಗೆ 2,300 ರೂ. ಬೆಂಬಲ ಬೆಲೆ ಘೋಷಿಸಿದ್ದರೂ ಖರೀದಿ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಕ್ಕರೆ ಜೀವನಾವಶ್ಯಕವಸ್ತು ಪಟ್ಟಿಗೆ ಸೇರಿಸಿರುವ ಕೇಂದ್ರ ಸರಕಾರ, ಹಲವಾರು ಉತ್ಪನ್ನಗಳನ್ನು ತಯಾರಿಸುವ ಜೋಳವನ್ನು ಸೇರಿಸದೆ ಅಜ್ಞಾನ ಪ್ರದರ್ಶಿಸಿದೆ. ಸರಕಾರಗಳು, ಹಲವು ಜನಪ್ರತಿನಿಧಿಗಳು ರೈತರ ಸಮಸ್ಯೆ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಅವರು ಕಿಡಿಕಾರಿದರು.
ಕೆಆರ್‍ಎಸ್‍ನಲ್ಲಿ ಸಾಕಷ್ಟು ನೀರಿದೆ. ಕನಿಷ್ಠ 4 ಕಟ್ಟು ಬೇಸಗೆ ಬೆಳೆಗೆ ನೀರು ಕೊಡಬಹುದು. ಆದ್ದರಿಂದ ಸರಕಾರ ಬೇಸಗೆ ಬೆಳೆಗೆ ನೀರುಹರಿಸಲು ಕ್ರಮವಹಿಸಬೇಕು ಎಂದು ಅವರು ತಾಕೀತು ಮಾಡಿದರು.
ಜಾತಿ, ಧರ್ಮ, ಹಣದಿಂದ ಮುಂದಿನ ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಸಮರದಲ್ಲಿ ತೊಡಗಿವೆ. ಮುಗ್ಧರ ಕೊಲೆಯನ್ನು ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಲವು ಪ್ರಗತಿಪರ ಸಂಘಟನೆಗಳು ಒಂದೊಂದು ಪಕ್ಷದ ಬೆನ್ನಿಗೆ ಬಿದ್ದಿವೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂದಾಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರೈತಸಂಘವು ಮುಂಬರುವ ಚುನಾವಣೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದಿಂದಲೇ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದು, ಜ.13 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಸಮಿತಿ ಸಭೆಯಲ್ಲಿ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕೇಂಬುದನ್ನು ನಿರ್ಧರಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶಂಭೂನಹಳ್ಳಿ ಸುರೇಶ್, ಲಿಂಗಪ್ಪಾಜಿ, ಯರಗನಹಳ್ಳಿ ರಾಮಕೃಷ್ಣಯ್ಯ, ದೇವರಾಜು, ಪಿ.ಕೆ.ನಾಗಣ್ಣ, ಸೀತಾರಾಮು ಹಾಗು ಲತಾಶಂಕರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







