ಕೊಹ್ಲಿ ಪಡೆಗೆ ಆಫ್ರಿಕದಲ್ಲಿ ಮೊದಲ ಪರೀಕ್ಷೆ
ಕೇಪ್‌ಟೌನ್ ನಲ್ಲಿ ಮೊದಲ ಕ್ರಿಕೆಟ್ ಟೆಸ್ಟ್

ಕೇಪ್‌ಟೌನ್, ಜ.4: ಭಾರತ ಮತ್ತು ದಕ್ಷಿಣ ಆಫ್ರಿಕ ತಂಡಗಳ ನಡುವಿನ ಮೂರು ಟೆಸ್ಟ್‌ಗಳ ಸರಣಿಯ ಮೊದಲ ಟೆಸ್ಟ್ ಶುಕ್ರವಾರ ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ಆರಂಭವಾಗಲಿದ್ದು, ವಿರಾಟ್ ಕೊಹ್ಲಿಗೆ ಟೀಮ್ ಇಂಡಿಯಾದ ನಾಯಕರಾದ ಬಳಿಕ ಇದು ದಕ್ಷಿಣ ಆಫ್ರಿಕದಲ್ಲಿ ಮೊದಲ ಸವಾಲು.
ಭಾರತ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂ.1 ತಂಡವಾಗಿದೆ. ಕಳೆದ ಎರಡು ವರ್ಷಗಳಿಂದ ಟೀಮ್ ಇಂಡಿಯಾದ ಪ್ರದರ್ಶನ ಉತ್ತಮವಾಗಿದೆ. ತವರಿನಲ್ಲಿ ಮಿಂಚಿದ ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿತ್ತು. ದಕ್ಷಿಣ ಆಫ್ರಿಕದಲ್ಲಿ ಭಾರತಕ್ಕೆ ಈ ತನಕ ಟೆಸ್ಟ್‌ನಲ್ಲಿ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಒಂದು ಸರಣಿಯಲ್ಲಿ ಮಾತ್ರ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಭಾರತದ ತಂಡದಲ್ಲಿರುವ ಬಹುತೇಕ ಆಟಗಾರರು ಮೊದಲ ಬಾರಿ ಆಫ್ರಿಕ ಪ್ರವಾಸ ಕೈಗೊಂಡಿದ್ದಾರೆ. ಸತತ 9 ಟೆಸ್ಟ್ ಸರಣಿಗಳಲ್ಲಿ ಜಯಿಸಿರುವ ಭಾರತ ವಿಶ್ವದ ನಂ.1 ಟೆಸ್ಟ್ ತಂಡವಾಗಿದೆ.ಕಳೆದ ವರ್ಷ ಭಾರತ ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿತ್ತು. ಆದರೆ ಈ ವರ್ಷದ ಸರಣಿ ಭಿನ್ನವಾಗಿದೆ.ತಂಡದ ನೈಜ ಶಕ್ತಿ, ಸಾಮರ್ಥ್ಯ ಅನಾವರಣಗೊಳ್ಳಲಿದೆ.
ದಕ್ಷಿಣ ಆಫ್ರಿಕ ತಂಡ ತವರಿನಲ್ಲಿ ಇತರ ತಂಡಗಳಿಗಿಂತ ಹೆಚ್ಚು ಬಲಿಷ್ಠವಾಗಿದೆ. ತಂಡಕ್ಕೆ ಗೆಲುವು ತಂದು ಕೊಡಬಲ್ಲ ಬೌಲರ್‌ಗಳಿದ್ದಾರೆ. ಈ ಕಾರಣದಿಂದಾಗಿ ಟೀಮ್ ಇಂಡಿಯಾದ ಬ್ಯಾಟ್ಸ್ ಮನ್‌ಗಳಿಗೆ ಸವಾಲು ಎದುರಾಗಲಿದೆ. ಮಾರ್ನೆ ಮೊರ್ಕೆಲ್,ರಬಾಡ , ವೆರ್ನಾನ್ ಫಿಲ್ಯಾಂಡರ್ ತವರಿನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ.
ದಕ್ಷಿಣ ಆಫ್ರಿಕ ಪ್ರವಾಸ ಕೈಗೊಂಡಿರುವ ಭಾರತದ ವೇಗಿಗಳ ಪೈಕಿ ಈ ತನಕ ಮುಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಮಾತ್ರ ಅಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಭುವನೇಶ್ವರ ಕುಮಾರ್, ಉಮೇಶ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಇದೇ ಮೊದಲ ಬಾರಿ ಪ್ರವಾಸ ಕೈಗೊಂಡಿದ್ದಾರೆ.
ಭಾರತಕ್ಕೆ ಈ ತನಕ ದಕ್ಷಿಣ ಆಫ್ರಿಕದಲ್ಲಿ ಒಂದೇ ಒಂದು ಟೆಸ್ಟ್ ಸರಣಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ದಕ್ಷಿಣ ಆಫ್ರಿಕ ಆರು ಬಾರಿ ಸರಣಿ ಜಯಿಸಿದೆ. ಈ ಬಾರಿ ಭಾರತಕ್ಕೆ ಸರಣಿ ಗೆಲುವಿಗೆ ಒಳ್ಳೆಯ ಅವಕಾಶ ಇದೆ. ಯಾಕೆಂದರೆ ತಂಡದಲ್ಲಿ ಬಲಿಷ್ಠ ದಾಂಡಿಗರ ಪಡೆ ಇದೆ.
ವಿಶ್ವದ ಎರಡು ಅಗ್ರ ತಂಡಗಳ ನಡುವಿನ ಹಣಾಹಣಿಯಲ್ಲಿ ಉಭಯ ತಂಡಗಳ ವೇಗದ ಬೌಲರ್‌ಗಳಿಗೆ ಸವಾಲು ಎದುರಾಗಲಿದೆ. ಆಫ್ರಿಕ ತಂಡದಲ್ಲಿರುವಂತೆ ಭಾರತದ ವೇಗದ ಬೌಲಿಂಗ್ ಪಡೆ ಬಲಿಷ್ಠವಾಗಿದೆ. ಟೀಮ್ ಇಂಡಿಯಾದಲ್ಲಿ ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ನಡೆಸುವ ವೇಗದ ಬೌಲರ್‌ಗಳಿದ್ದಾರೆ.
►ತಂಡದ ಸಮಾಚಾರ: ದಕ್ಷಿಣ ಆಫ್ರಿಕ ನಾಯಕ ಎಫ್‌ಡು ಪ್ಲೆಸಿಸ್ ಮಧ್ಯಮ ಸರದಿಯ ಬ್ಯಾಟಿಂಗ್‌ನ ಬೆನ್ನಲುಬು ಆಗಿದ್ದಾರೆ. ಕ್ವಿಂಟನ್ ಡಿ ಕಾಕ್ ಝಿಂಬಾಬ್ವೆ ಪ್ರವಾಸದ ವೇಳೆ ಗಾಯಗೊಂಡಿದ್ದರು. ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಎಬಿ ಡಿ ವಿಲಿಯರ್ಸ್ ಮತ್ತು ಆಲ್‌ರೌಂಡರ್ ಕ್ರಿಸ್ ಮೊರೀಸ್ ತಂಡಕ್ಕೆ ವಾಪಸಾಗಿದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಮೊರ್ನೆ ಮೊರ್ಕಲ್ ಮುನ್ನಡೆಸಲಿದ್ದಾರೆ. ಕಾಗಿಸೋ ರಬಾಡ ಮತ್ತು ವೆರ್ನಾನ್ ಫಿಲ್ಯಾಂಡರ್ ಇವರಿಗೆ ಬೆಂಬಲ ನೀಡಲಿದ್ದಾರೆ. ಭಾರತ ತಂಡದಲ್ಲಿ ನಂ.6ನೇ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ತಲೆನೋವು ಕಂಡು ಬಂದಿದೆ. ಐದು ಬೌಲರ್‌ಗಳೊಂದಿಗೆ ತಂಡ ಕಣಕ್ಕಿಳಿದರೆ ಹಾರ್ದಿಕ್ ಪಾಂಡ್ಯ ವೇಗದ ಬೌಲಿಂಗ್‌ಗೆ ಉತ್ತಮ ಆಯ್ಕೆ ಆದರೆ ಅವರನ್ನು ಖಾಲಿ ಇರುವ ನಂ.6 ಸ್ಥಾನದಲ್ಲಿ ಅವರನ್ನು ಬ್ಯಾಟಿಂಗ್‌ಗೆ ಇಳಿಸುವುದು ಕಷ್ಟ. ಯಾಕೆಂದರೆ ಅವರಿಗೆ ಟೆಸ್ಟ್ ನಲ್ಲಿ ಆಡಿ ಹೆಚ್ಚು ಅನುಭವ ಇಲ್ಲ. ರೋಹಿತ್ ಶರ್ಮಾ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅತ್ಯುತ್ತಮ ಫಾರ್ಮ್‌ನಲ್ಲಿರುವ ರೋಹಿತ್ ಶರ್ಮಾ ಸ್ಥಾನ ಗಿಟ್ಟಿಸಿಕೊಂಡರೆ ಪಾಂಡ್ಯ ಅವರಿಗೆ ಆಲ್‌ರೌಂಡರ್ ಸ್ಥಾನ ಸಿಗುವುದು ಕಷ್ಟ. ಹಾರ್ದಿಕ್ ಪಾಂಡ್ಯ ಅವರು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಿರಲಿಲ್ಲ. ದಕ್ಷಿಣ ಆಫ್ರಿಕ ವಿರುದ್ಧದ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿತ್ತು.
ಆಲ್‌ರೌಂಡರ್ ರವೀಂದ್ರ ಜಡೇಜ ಜ್ವರದ ಕಾರಣದಿಂದಾಗಿ ತಂಡದಿಂದ ಹೊರಗುಳಿಯಲಿದ್ದಾರೆ. ಗಾಯಗೊಂಡಿರುವ ಆರಂಭಿಕ ದಾಂಡಿಗ ಚೇತೇಶ್ವರ ಪೂಜಾರ ಚೇತರಿಸಿಕೊಂಡಿದ್ದು, ಅವರು ಮೊದಲ ಟೆಸ್ಟ್‌ಗೆ ಲಭ್ಯರಿದ್ದಾರೆ.
ಧವನ್ ಮೊದಲ ಟೆಸ್ಟ್‌ಗೆ ಆಡಲು ಲಭ್ಯರಿರುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ.ಭಾರತಕ್ಕೆ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ರವಿಚಂದ್ರನ್ ಅಶ್ವಿನ್ ಇಬ್ಬರಲ್ಲಿ ಒಬ್ಬರು ಹೊರಗುಳಿಯಬೇಕಾದ ಪರಿಸ್ಥಿತಿ ಇತ್ತು.
ಇದೀಗ ಜಡೇಜ ಅನುಪಸ್ಥಿತಿ ರೋಹಿತ್ ಶರ್ಮಾಅವರಿಗೆ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಅನುಕೂಲವಾಗಿದೆ. ಧವನ್ ತಂಡದಲ್ಲಿ ಆಡಲು ಲಭ್ಯರಿರುವ ಹಿನ್ನೆಲೆಯಲ್ಲಿ ಆರಂಭಿಕ ದಾಂಡಿಗ ಲೋಕೇಶ್ ರಾಹುಲ್‌ಗೆ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುವ ಸಾಧ್ಯತೆ ಇಲ್ಲ.
ಅಂಕಿ ಅಂಶ
►ಸ್ಟೇಯ್ನ, ಮೊರ್ಕೆಲ್, ಫಿಲ್ಯಾಂಡರ್ ಮತ್ತು ರಬಾಡ ಅವರು ಒಟ್ಟು 235 ಟೆಸ್ಟ್‌ಗಳಲ್ಲಿ 976 ವಿಕೆಟ್ ಪಡೆದಿದ್ದಾರೆ.
►ಇಶಾಂತ್, ಶಮಿ, ಭುವನೇಶ್ವರ ಇಶಾಂತ್ ಮತ್ತು ಪಾಂಡ್ಯ ಒಟ್ಟು 164 ಟೆಸ್ಟ್‌ಗಳಲ್ಲಿ 477 ವಿಕೆಟ್‌ಗಳನ್ನು ಪಡೆದಿದ್ದಾರೆ.
►ದಕ್ಷಿಣ ಆಫ್ರಿಕ ನ್ಯೂಲ್ಯಾಂಡ್ಸ್‌ನಲ್ಲಿ ಆಡಿರುವ 54 ಟೆಸ್ಟ್‌ಗಳಲ್ಲಿ 23ರಲ್ಲಿ ಜಯ ಗಳಿಸಿದೆ. 20ರಲ್ಲಿ ಸೋಲು ಅನುಭವಿಸಿದೆ. 11 ಡ್ರಾಗೊಂಡಿದೆ.
►ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕದಲ್ಲಿ ಆಡಿರುವ 2 ಟೆಸ್ಟ್ ಗಳಲ್ಲಿ 272 ರನ್ ಗಳಿಸಿದ್ದಾರೆ. ಒಂದು ಟೆಸ್ಟ್‌ನಲ್ಲಿ 119ರನ್ ಮತ್ತು 96 ರನ್ ಗಳಿಸಿದ್ದಾರೆ.
ಸಂಭಾವ್ಯ ತಂಡ
►ಭಾರತ:ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ/ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಭುವನೇಶ್ವರ್ ಕುಮಾರ್, ಮುಹಮ್ಮದ್ ಶಮಿ, ಇಶಾಂತ್ ಶರ್ಮಾ.
►ದಕ್ಷಿಣ ಆಫ್ರಿಕ: ಎಫ್ ಡು ಪ್ಲೆಸಿಸ್(ನಾಯಕ), ಟೆಂಬಾ ಬಾವುಮಾ, ಕ್ರಿಸ್ ಮೋರಿಸ್/ಆಂಡಿಲ್ ಫೆಹ್ಲುಕ್ವಾವೊ, ವೆರ್ನಾನ್ ಫಿಲ್ಯಾಂಡರ್, ಕಾಗಿಸೊ ರಬಾಡ, ಕೇಶವ್ ಮಹಾರಾಜ್, ಮೊರ್ನೆ ಮೊರ್ಕೆಲ್.
►ಪಂದ್ಯದ ಸಮಯ: ಮಧ್ಯಾಹ್ನ 2:00 ಗಂಟೆಗೆ







