ಆಸ್ಟ್ರೇಲಿಯನ್ ಓಪನ್‌ನಿಂದ ಹಿಂದೆ ಸರಿದ ಆ್ಯಂಡಿ ಮರ್ರೆ

ಸಿಡ್ನಿ, ಜ.4: ಮಾಜಿ ನಂ.1 ಆಟಗಾರ ಬ್ರಿಟನ್‌ನ ಆ್ಯಂಡಿ ಮರ್ರೆ ಅವರು ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಗುರುವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್‌ನಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದಾರೆ.
ಗಾಯದಿಂದಾಗಿ ಜಪಾನ್‌ನ ಸ್ಟಾರ್ ಆಟಗಾರ ಕೀ ನಿಶಿಕೋರಿ ಅವರು ಈಗಾಗಲೇ ಆಸ್ಟ್ರೇಲಿಯನ್ ಓಪನ್‌ನಿಂದ ಹಿಂದೆ ಸರಿದಿದ್ದಾರೆ. ಇದೀಗ ಮರ್ರೆ ಅವರು ಗಾಯಾಳುಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ.
30ರ ಹರೆಯದ ಮರ್ರೆ ಅವರು ಕಳೆದ ವರ್ಷ ವಿಂಬಲ್ಡನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದ ಬಳಿಕ ಎಟಿಪಿ ಟೂರ್ ಪಂದ್ಯಗಳಲ್ಲಿ ಆಡಿರಲಿಲ್ಲ.
‘‘ದುಃಖದ ವಿಷಯವೆಂದರೆ ನಾನು ಈ ವರ್ಷ ಮೆಲ್ಬೋರ್ನ್ ನಲ್ಲಿ ಆಡುವುದಿಲ್ಲ. ನಾನು ಸ್ಪರ್ಧೆಗೆ ಇನ್ನೂ ಸಿದ್ಧನಾಗಿಲ್ಲ’’ ಎಂದು ಮರ್ರೆ ತಿಳಿಸಿದ್ದಾರೆ. ಆಸ್ಟ್ರೇಲಿಯನ್ ಓಪನ್ ಜನವರಿ 15ರಂದು ಆರಂಭವಾಗಲಿದೆ.
ಏಷ್ಯಾದ ನಂ.1 ಆಟಗಾರ ನಿಶಿಕೋರಿ ಅವರು ಕಳೆದ ವರ್ಷದ ಆಗಸ್ಟ್‌ನಿಂದ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರವಾಗಿದ್ದಾರೆ. ಸಿನ್ಸಿನಾಟಿ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದ್ದ ವೇಳೆ ಅವರು ಗಾಯಗೊಂಡಿದ್ದರು.
6 ಬಾರಿ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದ ಮಾಜಿ ನಂ.1 ಆಟಗಾರ ನೊವಾಕ್ ಜೊಕೊವಿಕ್ ಅವರು ಗಾಯದಿಂದಾಗಿ ಕಳೆದ ವರ್ಷ ವಿಂಬಲ್ಡನ್ ಕ್ವಾರ್ಟರ್ ಫೈನಲ್‌ನಿಂದ ನಿರ್ಗಮಿಸಿದ್ದರು. ಬಳಿಕ ಅವರು ಅಬುಧಾಬಿಯಲ್ಲಿ ಪ್ರದರ್ಶನ ಪಂದ್ಯ ಮತ್ತು ಕತರ್ ಓಪನ್‌ನಲ್ಲಿ ಆಡುವುದು ನಿಗದಿಯಾಗಿದ್ದಾರೂ ಕೊನೆಯ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಆಸ್ಟ್ರೇಲಿಯನ್ ಓಪನ್‌ಗಿಂತ ಮುಂಚಿತವಾಗಿ ಮುಂದಿನ ವಾರ ನಡೆಯಲಿರುವ ಪ್ರದರ್ಶನ ಪಂದ್ಯದಲ್ಲಿ ಅವರು ಆಡಲಿದ್ದಾರೆ. ಆ ಬಳಿಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ಭಾಗವಹಿಸುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.







