ಪ್ರಾದೇಶಿಕ ಸೇನೆಯಲ್ಲಿ ಮಹಿಳೆಯರ ನೇಮಿಸಿ: ದಿಲ್ಲಿ ಉಚ್ಛ ನ್ಯಾಯಾಲಯದಿಂದ ಮಹತ್ವದ ಆದೇಶ

ಹೊಸದಿಲ್ಲಿ, ಜ.5: ಪ್ರಾದೇಶಿಕ ಸೇನೆಯಲ್ಲಿ ಮಹಿಳೆಯರನ್ನೂ ನೇಮಿಸಬೇಕು ಎಂದು ದಿಲ್ಲಿ ನ್ಯಾಯಾಲಯವು ಶುಕ್ರವಾರದಂದು ಮಹತ್ವದ ಆದೇಶ ನೀಡಿದೆ. ಮಹಿಳೆಯರ ನೇಮಕವನ್ನು ತಡೆಯುವ ಯಾವುದೇ ನಿಬಂಧನೆ ಕೂಡಾ ಸಂವಿಧಾನ ಅವರಿಗೆ ನೀಡಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಪ್ರಾದೇಶಿಕ ಸೇನೆಯು ಸಾಮಾನ್ಯ ಸೇನೆಯ ನಂತರದ ಸಾಲಿನಲ್ಲಿರುವ ರಕ್ಷಣಾ ಪಡೆಯಾಗಿದೆ.
ಈ ಬಗ್ಗೆ ಆದೇಶ ನೀಡಿದ ಪ್ರಭಾರ ಮುಖ್ಯ ನ್ಯಾಯಾಧೀಶರಾದ ಗೀತಾ ಮಿತ್ತಲ್ ಮತ್ತು ನ್ಯಾಯಾಧೀಶರಾದ ಸಿ. ಹರಿಶಂಕರ್ ಅವರನ್ನೊಳಗೊಂಡ ಪೀಠವು ಪ್ರಾದೇಶಿಕ ಸೇನೆ ಕಾಯ್ದೆಯ ಸೆಕ್ಷನ್ 6ರಂತೆ ಪುರುಷರು ಮತ್ತು ಮಹಿಳೆಯರನ್ನು ನೇಮಕ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದೆ. ನ್ಯಾಯವಾದಿ ಕುಶ್ ಕಲ್ರ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ನಟರಾದ ಮೋಹನ್ ಲಾಲ್, ಕ್ರಿಕೆಟ್‌ಪಟು ಕಪಿಲ್ ದೇವ್ ಮತ್ತು ಎಂ.ಎಸ್ ಧೋನಿ ಮುಂತಾದವರು ಗೌರವಾನ್ವಿತ ಸದಸ್ಯರಾಗಿ ಹಿರಿಯ ಸ್ಥಾನಗಳನ್ನು ಹೊಂದಿರುವ ಪ್ರಾದೇಶಿಕ ಸೇನೆಯಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ನಡೆಯುತ್ತಿದೆ ಎಂದು ಕಲ್ರ ಆರೋಪಿಸಿದ್ದರು.
ಪ್ರಾದೇಶಿಕ ಸೇನೆ ಸ್ವಯಂ ಸೇವಕರ ಪಡೆಯಾಗಿದ್ದು, ತುರ್ತುಸ್ಥಿತಿಯ ಸಮಯದಲ್ಲಿ ದೇಶದ ರಕ್ಷಣೆಗೆ ಬಳಸಿಕೊಳ್ಳಬಹುದು ಎಂಬ ದೃಷ್ಟಿಯಿಂದ ಇವರಿಗೆ ಸೇನಾ ತರಬೇತಿಯನ್ನು ನೀಡಲಾಗುತ್ತದೆ. ಆದರೆ ಮಹಿಳೆಯರನ್ನು ಈ ಸೇನೆಯಲ್ಲಿ ನೇಮಿಸದೆ ‘ಸಾಂಸ್ಥಿಕ ತಾರತಮ್ಯ’ ನಡೆಸಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದರು.