ರಾಜಕೀಯ ತೇಜೋವಧೆಯ ಪ್ರಯತ್ನ ಫಲಿಸದು: ಸಚಿವ ಖಾದರ್

ಮಂಗಳೂರು, ಜ.5: ರಾಜಕೀಯವಾಗಿ ನನ್ನನ್ನು ತೇಜೋವಧೆಗೆ ಪ್ರಯತ್ನಗಳು ನಡೆಯುತ್ತಿದ್ದು, ಅದು ಫಲಿಸುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಟಾರ್ಗೆಟ್ ಗುಂಪಿನ ಸದಸ್ಯ ಇಲ್ಯಾಸ್ ಜತೆ ತಾನು ಊಟ ಮಾಡುತ್ತಿರುವ ಪೋಟೊ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿರುವ ಕುರಿತು ಮತ್ತು ಸುರತ್ಕಲ್‌ನಲ್ಲಿ ನಡೆದ ದೀಪಕ್ ರಾವ್ ಹತ್ಯೆ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ರಾಜಕೀಯ ತೇಜೋವಧೆ ಮಾಡುವ ಕೆಲಸ ಬಹಳ ಹಿಂದಿನಿಂದಲೇ ನಡೆಯುತ್ತಿದೆ. ನಾನು ಶಾಸಕನಾಗುವ ಮೊದಲು ನನ್ನ ತಂದೆ ಶಾಸಕರಾಗಿದ್ದಾಗಲೂ ನಡೆದಿದೆ. ಆದರೆ ನನ್ನ ಕ್ಷೇತ್ರದ ಜನತೆ ನನ್ನಲ್ಲಿ ವಿಶ್ವಾಸವಿರಿಸಿ ಅವರ ಮಗ, ಸಹೋದರನಂತೆ ಕಂಡಿದ್ದಾರೆ. ನನ್ನ ಹಾಗೂ ನನ್ನ ಕ್ಷೇತ್ರದ ಜನತೆಯ ನಡುವೆ ಯಾರಾದರೂ ವೈಮನಸ್ಸು ಮೂಡಿಸುವ ಪ್ರಯತ್ನ ಮಾಡಿದರೆ ಅದು ಸಫಲವಾಗುವುದಿಲ್ಲ. ಜಾತಿ, ಧರ್ಮ ಮರೆತು ಸರ್ವರೂ ನನ್ನ ಜತೆಗಿದ್ದಾರೆ ಎಂದರು.
ಟಾರ್ಗೆಟ್ ಗುಂಪಿನ ಸದಸ್ಯ ಇಲ್ಯಾಸ್ ಜತೆ ನನಗೆ ನಂಟು ಇದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದುದು. ನಾನು ಆತನೊಂದಿಗೆ ಊಟ ಮಾಡುವ ಫೋಟೊ ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಇಂತಹ ಆರೋಪಗಳಿಗೆ ಏನೂ ಮಾಡಲಾಗುವುದಿಲ್ಲ. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಇಲ್ಯಾಸ್ ಸ್ಪರ್ಧಿಸಿದ್ದ. ಪಕ್ಕದಲ್ಲಿ ಬಂದು ಊಟಕ್ಕೆ ಕೂತರೆ ನಾನು ಏನು ಮಾಡುವುದು. ಯುವ ಕಾಂಗ್ರೆಸ್ ಸದಸ್ಯತ್ವಕ್ಕೆ ಯಾರೂ ಬೇಕಾದರೂ ಅರ್ಜಿ ಹಾಕಬಹುದು, ಅದು ಆನ್‌ಲೈನ್ ಮೂಲಕ ನಡೆಯುತ್ತದೆ. ಯುವ ಕಾಂಗ್ರೆಸ್ ಚುನಾವಣೆಗೆ ಪ್ರತ್ಯೇಕ ಚುನಾವಣಾ ವ್ಯವಸ್ಥೆ ಇದೆ. ಇಲ್ಯಾಸ್‌ಗೆ ಸದಸ್ಯತ್ವ ನೀಡುವ ಕುರಿತು ಹಿಂದೆಯೇ ಆಕ್ಷೇಪ ಸಲ್ಲಿಸಲಾಗಿದೆ. ಆತ ಚುನಾವಣೆಗೆ ನಿಂತು ಸೋತು ನಿಯಮದಂತೆ ಉಪಾಧ್ಯಕ್ಷ ನಾಗಿದ್ದಾನೆ. ಆ ಬಳಿಕ ಹಲ್ಲೆ ಘಟನೆಯೊಂದರಲ್ಲಿ ಜೈಲಿಗೆ ಸೇರಿದ್ದಾನೆ. ಆತನನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಇಲ್ಯಾಸ್ ವಿರುದ್ಧ ಕೋಮು ಘಟನೆಯ ಪ್ರಕರಣಗಳು ದಾಖಲಾಗಿಲ್ಲ. ಉಳ್ಳಾಲದಲ್ಲಿ ಹಿಂದೆ ಟಾರ್ಗೆಟ್ ಗುಂಪು ಇತ್ತು. ಈ ಗುಂಪು ಕಾನೂನನ್ನು ಕೈಗೆತ್ತಿಕೊಂಡು ಕಾರ್ಯಾಚರಣೆ ಮಾಡುತ್ತಿದ್ದು, ಟಾರ್ಗೆಟ್ ಗುಂಪನ್ನು ಉಳ್ಳಾಲದಿಂದ ಓಡಿಸಿದ್ದೇವೆ. ಈಗ ಉಳ್ಳಾಲದಲ್ಲಿ ಟಾರ್ಗೆಟ್ ಗುಂಪು ಇಲ್ಲ ಎಂದು ಹೇಳಿದರು.
ದೀಪಕ್ ರಾವ್ ಕೊಲೆ ಖಂಡನೀಯ. ಕೊಲೆಯ ಹಿಂದೆ ಯಾರಿದ್ದರೂ ಎಷ್ಟೇ ದೊಡ್ಡ ಶಕ್ತಿ ಇದ್ದರೂ ದಂಡಿಸಬೇಕು. ಇದರಲ್ಲಿ ರಾಜಕೀಯ ಬೇಡ. ಸಾಮಾಜಿಕ ಸಾಮರಸ್ಯ ಕಾಪಾಡಲು ಎಲ್ಲಾ ರಾಜಕೀಯ ಪಕ್ಷಗಳು ಜತೆಯಾಗಿ ಕೆಲಸ ಮಾಡಬೇಕು. ರಾಜ್ಯ ಸರಕಾರ ಕೂಡಾ ಇಂತಹ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಬೇಕು. ಇಲ್ಲಿಯ ತನಕ ಜಿಲ್ಲೆಯಲ್ಲಿ ನಡೆದಿರುವ ಪ್ರತಿಯೊಂದು ಕೊಲೆ ಪ್ರಕರಣದ ಸಮಗ್ರ ತನಿಖೆಯಾಗಿ ಯಾರು, ಯಾಕೆ ಕೊಲೆ ಮಾಡಿದ್ದಾರೆ, ಮಾಡಿಸಿದವರು ಯಾರು, ಹಣಕಾಸು ನೆರವು, ನ್ಯಾಯವಾದಿಗಳನ್ನು ಗೊತ್ತು ಮಾಡಿಸಿದವರು ಎಂಬಿತ್ಯಾದಿ ವಿವರಗಳು ಬಯಲಾಗಬೇಕು. ಆಗ ಎಲ್ಲರ ಬಂಡವಾಳ ಹೊರ ಬರುತ್ತದೆ. ಈಗಿನ ಪರಿಸ್ಥಿತಿಯಲ್ಲಿ ದೀಪಕ್ ರಾವ್ ಮನೆಗೆ ಹೋಗಲು ನನಗೆ ಮನಸ್ಸಿದ್ದರೂ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಸಾಮಾಜಿಕ ಜಾಲತಾಣಳಲ್ಲಿ ಗೊಂದಲ ಸೃಷ್ಟಿಸಲಾಗುತ್ತಿದೆ. ಸುರತ್ಕಲ್‌ನಲ್ಲಿ ದೀಪಕ್ ಕೆಲಸ ಮಾಡುತ್ತಿದ್ದ ಮೊಬೈಲ್ ಅಂಗಡಿ ಮಾಲಕ ಮಜೀದ್ ಸೇರಿದಂತೆ ಆ ಪ್ರದೇಶದ ಮುಸ್ಲಿಂ ಬಂಧುಗಳಿಗೆ ದೀಪಕ್ ಮನೆಗೆ ಹೋಗಲು ಮನಸ್ಸಿತ್ತು, ಆದರೆ ರಾಜಕೀಯದಿಂದಾಗಿ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.







