ಕೆಂಪಣ್ಣ ಆಯೋಗದ ವರದಿ ಅಧಿವೇಶನದಲ್ಲಿ ಮಂಡಿಸಲು ಆಗ್ರಹ
ಬೆಂಗಳೂರು, ಜ.5: ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಸಂಬಂಧ ನಿವೃತ್ತ ನ್ಯಾ. ಎಚ್.ಎಸ್.ಕೆಂಪಣ್ಣ ಆಯೋಗ ಸರಕಾರಕ್ಕೆ ಸಲ್ಲಿಸಿರುವ ತನಿಖಾ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಜನ್ಮಭೂಮಿ ಫೌಂಡೇಶನ್ ಆಗ್ರಹಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಷನ್‌ನ ಅಧ್ಯಕ್ಷ ನಟರಾಜ್ ಶರ್ಮಾ, ಅರ್ಕಾವತಿ ಡಿನೋಟಿಫಿಕೇಶನ್ ಸಂಬಂಧ ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿದು ಆಯೋಗ ರಚನೆ ಮಾಡಲಾಗಿತ್ತು. ಎರಡು ವರ್ಷಗಳ ಕಾಲ ವಿಚಾರಣೆ ನಡೆಸಿದ ಆಯೋಗ ಆಗಸ್ಟ್ 2017ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಈ ಸಂಬಂಧ ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
ಕೆಂಪಣ್ಣ ಆಯೋಗ ತನಿಖೆ ಆರಂಭಿಸಿದ ನಂತರ ಆಯೋಗಕ್ಕೆ ಅಗತ್ಯವಿರುವ ದಾಖಲೆಗಳು ಹಾಗೂ ಸಾಕ್ಷಿಗಳನ್ನು ಜನ್ಮಭೂಮಿ ಫೌಂಡೇಷನ್‌ನಿಂದ ಒದಗಿಸಲಾಗಿತ್ತು. ಈ ಎಲ್ಲಾ ಸಾಕ್ಷಿಗಳನ್ನೊಳಗೊಂಡಂತೆ ಆಯೋಗ ಸಂಪೂರ್ಣ ವರದಿ ಸಿದ್ಧಪಡಿಸಿದೆ. ಇದುವರೆಗೂ ಸದನದಲ್ಲಿ ಮಂಡಿಸದ ಪರಿಣಾಮ ಇದೊಂದು ಸಾರ್ವಜನಿಕ ದಾಖಲೆಯಾಗಿಲ್ಲ. ಆದ್ದರಿಂದ ವರದಿಯನ್ನು ಸದನದಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿದರು.
ಅರ್ಕಾವತಿ ಬಡಾವಣೆಯಲ್ಲಿ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಸರಕಾರದಿಂದ ಒದಗಿಸಿದ ಬಳಿಕ ಖಾಸಗಿ ಬಿಲ್ಡರ್‌ಗಳಿಗೆ ಹಸ್ತಾಂತರಿಸಲಾಗಿದೆ. ಸುಮಾರು 70 ಸಾವಿರ ಅರ್ಜಿದಾರರು ಶುಲ್ಕ ಭರಿಸಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರಿಂದ ಸರಕಾರ 380 ಕೋಟಿ ರೂ. ಗಳನ್ನು ಸಂಗ್ರಹಿಸಿದೆ. ಅಲ್ಲದೆ, ಕೆಂಪಣ್ಣ ಆಯೋಗಕ್ಕೆ 2 ವರ್ಷಗಳ ತನಿಖೆಗಾಗಿ ಸುಮಾರು 1.80 ಕೋಟಿ ಹಣ ಖರ್ಚು ಮಾಡಲಾಗಿದೆ. ಹಾಗಾಗಿ ವರದಿಯನ್ನು ಸದನದಲ್ಲಿ ಮಂಡಿಸುವ ಮೂಲಕ ಸಾರ್ವಜನಿಕರಿಗೆ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.
ಸಿಎಸ್‌ಗೆ ಮನವಿ
ಸರಕಾರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾರನ್ನು ಭೇಟಿ ಮಾಡಿದ್ದ ಫೌಂಡೇಷನ್ ಅಧ್ಯಕ್ಷ ನಟರಾಜ್ ಶರ್ಮಾ ಸರಕಾರಕ್ಕೆ ಸಲ್ಲಿಸಿರುವ ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಬೇಕು ಎಂದು ಮನವಿ ಸಲ್ಲಿಸಿದರು.







