ಜಮೀಯ್ಯತುಲ್ ಫಲಾಹ್ ವತಿಯಿಂದ ವಿದ್ಯಾರ್ಥಿಗಳಿಗೆ ಚಿಂತನಾ ಸಭೆ

ಮಂಗಳೂರು, ಜ. 5: ಜಮೀಯ್ಯತುಲ್ ಫಲಾಹ್ ದ.ಕ ಮತ್ತು ಉಡುಪಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ. ಜಿ.ಪಂ ಇದರ ಸಹಯೋಗದೊಂದಿಗೆ ಎಸೆಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ವೃದ್ಧಿಯ ಬಗೆಗೆ ಚಿಂತನಾ ಸಭೆಯನ್ನು ಜೆ.ಎಫ್. ಸಮುದಾಯ ಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಜೆ.ಎಫ್ ಕೇಂದ್ರ ಸಮಿತಿಯ ಅಧ್ಯಕ್ಷರು ಮತ್ತು ದ.ಕ.ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಶಾಹುಲ್ ಹಮೀದ್ ಕೆ.ಕೆ ಇವರು ಎಸೆಸೆಲ್ಸಿ ಶಿಕ್ಷಣದ ಮಹತ್ವ, ಫಲಿತಾಂಶವನ್ನು ವೃದ್ಧಿಸುವಲ್ಲಿ ಶಿಕ್ಷಕರ ಪಾತ್ರ, ವಿದ್ಯಾರ್ಥಿಗಳ ಪೋಷಕರ ಸಹಕಾರ ಮತ್ತು ಸಂಘ ಸಂಸ್ಥೆಗಳು, ಧಾರ್ಮಿಕ ಮುಖಂಡರ ಜವಾಬ್ದಾರಿತನದ ಬಗ್ಗೆ ಹೇಳಿದರು.
ಕಾರ್ಯಕ್ರಮದಲ್ಲಿ ಜಿ.ಪಂ.ಮುಖ್ಯ ನಿರ್ವಾಹಣಾಧಿಕಾರಿ ಡಾ. ಎಂ.ಆರ್.ರವಿ, ಡಿಡಿಪಿಐ ಶಿವರಾಮಯ್ಯ, ಶಿಕ್ಷಕರನ್ನುದ್ದೇಶಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಂ.ತಾ.ಪಂ ಅಧ್ಯಕ್ಷರಾದ ಮುಹಮ್ಮದ್ ಮೋನು, ಜೆ.ಎಫ್ ಕೇಂದ್ರ ಸಮಿತಿಯ ಕೋಶಾಧಿಕಾರಿ ಇಬ್ರಾಹೀಂ ಕೋಡಿಜಾಲ್ ಉಪಸ್ಥಿತರಿದ್ದರು.
ದ.ಕ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕಿನ ವಿವಿಧ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು, ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಜೆ.ಎಫ್ ಘಟಕಗಳ ಸದಸ್ಯರು ಸೇರಿ ಸುಮಾರು 160 ಜನ ಸಭೆಯಲ್ಲಿ ಪಾಲ್ಗೊಂಡರು. ಜೆ.ಎಫ್ ಅಧ್ಯಕ್ಷರಾದ ಶಾಹುಲ್ ಹಮೀದ್ ಮತ್ತು ಡಿಡಿಪಿಐ ಶಿವರಾಮಯ್ಯ ಜಂಟಿಯಾಗಿ ಫಲಿತಾಂಶ ವೃದ್ಧಿಯ ಮಾರ್ಗೋಪಾಯಗಳ ಬಗ್ಗೆ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಜೆ.ಎಫ್ ಪ್ರಧಾನ ಕಾರ್ಯದರ್ಶಿ ಸಲೀಂ ಹಂಡೇಲ್ ವಂದಿಸಿದರು ಮತ್ತು ಶಿಕ್ಷಣ ಇಲಾಖೆಯ ಶಮಂತ್ ಕಾರ್ಯಕ್ರಮವನ್ನು ನಿರ್ವಹಿಸಿದರು.







