ಮೂಡಿಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರ ಪ್ರತಿಭಟನೆ

ಮೂಡಿಗೆರೆ, ಜ.5: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂಡಿಗೆರೆ ಪಟ್ಟಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ವೇಳೆ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸರಕಾರಿ ಕಛೇರಿಗಳಲ್ಲಿ ಕೆಲಸವಾಗುತ್ತಿಲ್ಲ. ಅಧಿಕಾರಿಗಳು ಜನಪ್ರತಿನಿಧಿಗಳ ಹಿಂಬಾಲಕರಾಗಿದ್ದಾರೆ. ಕಛೇರಿಗೆ ವಿವಿಧ ಕೆಲಸಗಳಿಗೆ ಬರುವ ಗ್ರಾಮೀಣ ಭಾಗದ ಜನರಿಗೆ ಅಧಿಕಾರಿಗಳು ಕನಿಷ್ಠ ಮಟ್ಟದ ಗೌರವವನ್ನೂ ನೀಡುತ್ತಿಲ್ಲ. ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಡದೇ ಸತಾಯಿಸುತ್ತಿದ್ದಾರೆ. ಇದರಿಂದ ಕೂಲಿ ಕೆಲಸದಿಂದ ಬದುಕುವ ಜನರಿಗೆ ಸಮಸ್ಯೆ ಎದುರಾಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಗಂಭೀರ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮುಖ್ಯಮಂತ್ರಿಗಳ ಕಾರ್ಯಕ್ರಮದ ಬಳಿಗೆ ಪ್ರತಿಭಟನಾಕಾರರನ್ನು ತೆರಳಲು ಪೊಲೀಸರು ಬಿಡಲಿಲ್ಲ. ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಬಿಗು ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು ಪ್ರತಿಭಟನಾಕಾರ ರೈತರನ್ನು ಅರ್ಧದಲ್ಲಿಯೇ ತಡೆದು ನಿಲ್ಲಿಸಿದರು. ರೈತರು ಸಾಧನಾ ಸಮಾವೇಶ ನಡೆಯುತ್ತಿದ್ದ ಹೊಯ್ಸಳ ಕ್ರೀಡಾಂಗಣದ ದ್ವಾರದ ಬಳಿ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ರೈತ ಸಂಘದ ಮಂಜುನಥಗೌಡ, ಪುಟ್ಟಸ್ವಾಮಿಗೌಡ, ಬಿ.ಎಚ್.ಲಕ್ಷ್ಮಣ್, ಕೆ.ಕೆ.ಕೃಷ್ಣೆಗೌಡ,ಬಸವರಾಜು, ಲಿಂಗರಾಜು, ನಾರಾಯಣಗೌಡ ಮತ್ತಿತರರಿದ್ದರು.







