ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾದ ಲಾಲೂ

ರಾಂಚಿ, ಜ.5: ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಶುಕ್ರವಾರದಂದು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದರು.
ಮೇವು ಹಗರಣದಲ್ಲಿ ಲಾಲೂ ದೋಷಿ ಎಂದು ಸಾಬೀತಾಗಿದ್ದು ಸದ್ಯ ಬಿರ್ಸ ಮುಂಡ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದಾರೆ. ಅಲ್ಲಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಿಬಿಐ ವಿಶೇಷ ನ್ಯಾಯಾಧೀಶ ಶಿವ ಪಾಲ್ ಸಿಂಗ್ ಲಾಲೂಗೆ ಸೂಚಿಸಿದ್ದರು. 1991 ಮತ್ತು 1994ರ ನಡುವೆ ಲಾಲೂ ಯಾದವ್ ಬಿಹಾರದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ದಿಯೋಗಡ್ ಖಜಾನೆಯಿಂದ ರೂ. 89.27ಲಕ್ಷ ವಂಚನೆಯಿಂದ ಪಡೆದುಕೊಂಡಿರುವ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಲಾಲೂಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಈ ಹಿಂದೆ ಬುಧವಾರದಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಡಿಸೆಂಬರ್ 23ರಂದು ಲಾಲೂ ಯಾದವ್ ಜೊತೆಗೆ ಇತರ ಹದಿನೈದು ಮಂದಿಯನ್ನು ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಸೇರಿದಂತೆ ಆರು ಜನರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.
ಲಾಲೂ ಪ್ರಸಾದ್ ಯಾದವ್ ತಪ್ಪಿತಸ್ಥರೆಂದು ಸಾಬೀತಾಗಿರುವ ಎರಡನೇ ಮೇವು ಹಗರಣ ಇದಾಗಿದೆ. ಅವರ ವಿರುದ್ಧ ಇನ್ನೂ ಮೂರು ಮೇವು ಹಗರಣಗಳ ಆರೋಪವಿದ್ದು ಅದರ ವಿಚಾರಣೆ ಬಾಕಿಯಿದೆ.





