ತಾರತಮ್ಯ ಇಲ್ಲದೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ: ಸಿದ್ಧರಾಮಯ್ಯ
ಕಡೂರು, ಜ.5: ಇಡೀ ರಾಜ್ಯದ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕರುಗಳು ಇದ್ದಾರೆ ಎಂಬುದನ್ನು ನೋಡದೆ, ಎಲ್ಲಾ ಕ್ಷೇತ್ರಗಳಿಗೂ ಅನುದಾನ ನೀಡಿ ಅಭಿವೃದ್ಧಿಪಡಿಸಲಾಗಿದೆ. ಹೈದರಾಬಾದ್ ಕರ್ನಾಟಕಕ್ಕೆ ಹೆಚ್ಚಿನ ಒತ್ತು ನೀಡಿ ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ. ನಂಜುಂಡಪ್ಪ ವರದಿಯ ಪ್ರಕಾರವು ಕೆಲಸ ಮಾಡಲಾಗಿದೆ. ರಾಜ್ಯದ ಪ್ರತಿ ಕ್ಷೇತ್ರಗಳು ಅಭಿವೃದ್ಧಿಯಾದಾಗ ರಾಜ್ಯದ ಸಮಗ್ರ ಅಭಿವೃದ್ಧಿಯಾದಂತೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ಅವರು ಶುಕ್ರವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೈದರಾಬಾದ್ ಕರ್ನಾಟಕಕ್ಕೆ 3000 ಕೋಟಿ ಅನುದಾನ ನೀಡಲಾಗಿದೆ. ಈ ಪ್ರದೇಶಗಳನ್ನು ಬಿಟ್ಟು ಉಳಿದ ಎಲ್ಲಾ ಕ್ಷೇತ್ರಗಳ ಅವಶ್ಯಕತೆಗೆ ಅನುಗುಣವಾಗಿ ಅನುದಾನ ನೀಡಲಾಗಿದೆ. ಪಕ್ಷಭೇದ, ತಾರತಮ್ಯ ಮಾಡಿರುವುದಿಲ್ಲ. ಕಡೂರು ಕ್ಷೇತ್ರದಲ್ಲಿ ಜೆ.ಡಿ.ಎಸ್. ಶಾಸಕರಿದ್ದರೂ ಸುಮಾರು 500 ಕೋಟಿ ರೂಗಳ ಅನುದಾನ ನೀಡುವುದರ ಮೂಲಕ ಕ್ಷೇತ್ರದ ಅಭಿವೃದ್ಧಿಪಡಿಸಲಾಗಿದೆ. ರಾಜ್ಯದ ಪ್ರತಿ ಜಿಲ್ಲೆಗಳ 3 ಕ್ಷೇತ್ರಗಳಿಗೆ ಯಾವುದೇ ಪಕ್ಷದ ಶಾಸಕರಿರಲಿ ಈ ಪ್ರವಾಸದಲ್ಲಿ ಆದ್ಯತೆ ನೀಡಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ನಮ್ಮ ಸಾಧನಾ ಪ್ರವಾಸದಲ್ಲಿ ಜೆ.ಡಿ.ಎಸ್, ಬಿ.ಜೆ.ಪಿ. ಶಾಸಕರಿರುವ ಕ್ಷೇತ್ರಗಳಿಗೂ ತೆರಳಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಕಾರ್ಯಕ್ರಮದ ಬಗ್ಗೆ ಹಲವಾರು ಟೀಕೆಗಳು ಬಂದಿವೆ. ಸರ್ಕಾರದ ಖರ್ಚಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯಾವ ಹಣ ಖರ್ಚು ಮಾಡುತ್ತಿದ್ದಾರೆ. ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಇದೇ ರೀತಿ ಮಾಡಿಕೊಂಡು ಬಂದಿರುತ್ತಾರೆ. ನಾನು ಅದನ್ನೇ ಮಾಡಿದ್ದೇನೆ ಎಂದು ತಿಳಿಸಿದರು.
ಯಾವುದೇ ಟೀಕೆಗಳಿಗೆ ಸೊಪ್ಪು ಹಾಕುವುದಿಲ್ಲ, ಬೆಲೆಯನ್ನೂ ನೀಡುವುದಿಲ್ಲ. ನಮ್ಮ ಮುಖ್ಯ ಗುರಿ ರಾಜ್ಯದ ಅಭಿವೃದ್ಧಿ. ಇಡೀ ರಾಜ್ಯದಲ್ಲಿ ನಮ್ಮ ಪ್ರವಾಸದಲ್ಲಿ 15 ಸಾವಿರ ಕೋಟಿ ರೂಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಖಜಾನೆ ಖಾಲಿಯಾಗಿದೆ ಎನ್ನುವ ಯಡಿಯೂರಪ್ಪನವರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಗೊತ್ತಿಲ್ಲ. ಪ್ರತೀ ವರ್ಷ ರೆವಿನ್ಯೂ ಇರಬೇಕು, ವಿತ್ತೀಯ ಕೊರತೆ ಶೇ.100 ಇರಬೇಕು, ಆಂತರಿಕ ಉತ್ಪನ್ನ ಶೇ.25 ಒಳಗಿರಬೇಕು. ಕಳೆದ 5 ವರ್ಷದಲ್ಲಿ ಯಾವುದೇ ಮಾನದಂಡವನ್ನು ಉಲ್ಲಂಘನೆ ಮಾಡಿರುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್, ಶಾಸಕ ವೈ.ಎಸ್.ವಿ. ದತ್ತ, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ, ಮಹೇಶ್ ಒಡೆಯರ್, ಲಕ್ಕಮ್ಮ ಸಿದ್ಧಪ್ಪ, ವನಮಾಲ ದೇವರಾಜ್, ಶರತ್ ಕೃಷ್ಣಮೂರ್ತಿ, ಕಾವೇರಿ ಲಕ್ಕಪ್ಪ, ಲೋಲಾಕ್ಷಿಬಾಯಿ, ರೇಣುಕಾ ಉಮೇಶ್, ಎಂ.ಮಾದಪ್ಪ, ಸವಿತಾ ರಮೇಶ್, ಜಿಲ್ಲಾಧಿಕಾರಿ ಶ್ರೀರಂಗಯ್ಯ, ತಹಸಿಲ್ದಾರ್ ಭಾಗ್ಯ ಉಪಸ್ಥಿತರಿದ್ದರು.







