ದಲಿತರ ಮೇಲಿನ ದೌರ್ಜನ್ಯದ ಬಗ್ಗೆ ಪ್ರಧಾನಿ ಮೌನ ಮುರಿಯಲಿ: ಜಿಗ್ನೇಶ್ ಮೇವಾನಿ

ಹೊಸದಿಲ್ಲಿ, ಜ. 5: ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ದಲಿತರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮೌನ ಮುರಿಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಆಗ್ರಹಿಸಿದ್ದಾರೆ.
ಮುಂಬೈಯಲ್ಲಿ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ ಒಂದು ದಿನದ ಬಳಿಕ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಮೇವಾನಿ, ಕೇಂದ್ರ ಸರಕಾರ ತನ್ನನ್ನು ಗುರಿ ಮಾಡುತ್ತಿದೆ ಎಂದಿದ್ದಾರೆ.
ನಾನು ಚುನಾಯಿತ ಪ್ರತಿನಿಧಿ. ಬಿಜೆಪಿ ನನಗೆ ಹೆದರುತ್ತಿದೆ. ನಾವು ಜಾತಿ ರಹಿತ ಭಾರತವನ್ನು ಬಯಸುತ್ತೇವೆ. ದಲಿತರಿಗೆ ಪ್ರತಿಭಟಿಸುವ ಹಕ್ಕಿಲ್ಲವೇ ಎಂದು ಅವರು ಹೊಸದಿಲ್ಲಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ವಿರೋಧಿಸಿ ಯುವ ಅಹಂಕಾರ್ ರ್ಯಾಲಿ ಆಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ. ಭೀಮ ಕೋರೆಗಾಂವ್‌ನ ಹೋರಾಟದ 200ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಕೋಮು ಸಾಮರಸ್ಯ ಕೆಡಿಸಿದ ಆರೋಪದಲ್ಲಿ ಪುಣೆ ಪೊಲೀಸರು ಜಿಗ್ನೇಶ್ ಮೇವಾನಿ ಹಾಗೂ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲಿದ್ ವಿರುದ್ಧ ಪ್ರಕರಣ ದಾಖಲಿಸಿದ್ದರು.





