ಆರ್ ಬಿಐ ಹೊರತರಲಿರುವ ನೂತನ 10 ರೂ. ನೋಟು ಹೀಗಿರಲಿದೆ…

ಹೊಸದಿಲ್ಲಿ, ಜ. 4: ಮಹಾತ್ಮಾ ಗಾಂಧಿ (ಹೊಸ) ಸರಣಿಯ 10 ರೂ. ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಬಿಡುಗಡೆ ಮಾಡಿದೆ. ನೂತನ 63 ಎಂಎಂ x 123 ಎಂಎಂ ನೋಟಿನಲ್ಲಿ ಆರ್‌ಬಿಐ ಗವರ್ನರ್ ಡಾ. ಊರ್ಜಿತ್ ಪಟೇಲ್ ಅವರ ಸಹಿ ಮುದ್ರಿಸಲಾಗಿದೆ. ನೋಟಿನ ಇನ್ನೊಂದು ಬದಿಯಲ್ಲಿ ದೇಶದ ಸಾಂಸ್ಕೃತಿಕ ಪರಂಪರೆಯಾದ ಸೂರ್ಯ ದೇವಾಲಯ, ಕೋನಾರ್ಕ್‌ನ ಚಿತ್ರಗಳನ್ನು ಅಳವಡಿಸಲಾಗಿದೆ.
ನೋಟಿನ ತಳಹದಿಯ ಬಣ್ಣ ಚಾಕಲೇಟ್ ಕಂದು. ನೋಟಿನ ಎರಡೂ ಬದಿಗಳಲ್ಲಿ ಒಟ್ಟು ಬಣ್ಣದೊಂದಿಗೆ ಹೊಂದಿಕೊಂಡು ಜ್ಯಾಮಿತಿ ಮಾದರಿ ಹಾಗೂ ಇತರ ವಿನ್ಯಾಸಗಳು ಇವೆ. ನೋಟಿನ ಶಿರೋಭಾಗದಲ್ಲಿ ಪಾರದರ್ಶಕವಾಗಿ ಸಂಖ್ಯೆ ಗೋಚರಿಸುತ್ತದೆ. ದೇವನಾಗರಿ ಲಿಪಿಯಲ್ಲಿ ಕೂಡ ಇದೇ ರೀತಿಯಲ್ಲಿ ಕಾಣುತ್ತದೆ. ನೋಟಿನ ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧಿ ಅವರ ಭಾವಚಿತ್ರ ಮೈಕ್ರೊ ಅಕ್ಷರ ‘ಆರ್‌ಬಿಐ’ ‘ಇಂಡಿಯಾ’ (ಇಂಗ್ಲಿಶ್ ಹಾಗೂ ಹಿಂದಿಯಲ್ಲಿ) ಹಾಗೂ 10 ಎಂದು ಬರೆಯಲಾಗಿದೆ. ಅಲ್ಲದೆ ಈ ನೋಟಿನಲ್ಲಿ ‘ಭಾರತ್’ (ಹಿಂದಿಯಲ್ಲಿ) ಹಾಗೂ ‘ಆರ್‌ಬಿಐ’ ಎಂದು ಬರೆಯಲಾಗಿದೆ.
ಗಾಂಧಿ ಭಾವಚಿತ್ರದ ಬಲಭಾಗದಲ್ಲಿ ಖಾತರಿ ನಿಬಂಧನೆ, ಭರವಸೆ ನಿಬಂಧನೆಯೊಂದಿಗೆ ಆರ್‌ಬಿಐ ಗವರ್ನರ್‌ರ ಸಹಿ ಹಾಗೂ ಬ್ಯಾಂಕ್‌ನ ಲಾಂಛನ ಇದೆ. ಎಡಭಾಗದಲ್ಲಿ ಅಶೋಕ ಸ್ತಂಭದ ಲಾಛನ ಹಾಗೂ ವಿದ್ಯುದಚ್ಚಿನ ವಾಟರ್ ಮಾರ್ಕ್ ಇದೆ. ಇದೇ ರೀತಿ ಇನ್ನೂ ಹಲವು ಲಕ್ಷಣಗಳನ್ನು ಈ ನೋಟು ಹೊಂದಿದೆ.