ಅಧಿಕೃತ ದಾಖಲೆ ಒದಗಿಸಲು ಹೈಕೋರ್ಟ್ ನಿರ್ದೇಶನ
ಸಾಧನಾ ಸಮಾವೇಶಕ್ಕೆ ತಡೆ ಕೋರಿ ಪಿಐಎಲ್ ಸಲ್ಲಿಕೆ

ಬೆಂಗಳೂರು, ಜ.5: ಆಡಳಿತಾರೂಢ ರಾಜ್ಯ ಸರಕಾರ ನಡೆಸುತ್ತಿರುವ ಸಾಧನಾ ಸಮಾವೇಶಕ್ಕೆ ತಡೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಗೆ ಸಂಬಂಧಿಸಿದಂತೆ ಹೈಕೋರ್ಟ್ ಅರ್ಜಿದಾರರಿಗೆ ಸಮಾವೇಶದ ಅಧಿಕೃತ ದಾಖಲೆಯ ವಿವರ ಒದಗಿಸಲು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು.
ಹನುಮಂತನಗರದ ಕೀರ್ತಿವರ್ಧನ ಜೋಷಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ರಾಜ್ಯ ಸರಕಾರ ತನ್ನ ನಾಲ್ಕುವರೆ ವರ್ಷಗಳ ಸಾಧನೆಯ ಹೆಸರಿನಲ್ಲಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ವರ್ಷದ ಡಿ.13ರಿಂದ ಸಮಾವೇಶ ನಡೆಸುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೊಕ್ಕಸದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.
ಸಿದ್ದರಾಮಯ್ಯ ಬೊಕ್ಕಸದ ಹಣವನ್ನು ತಮ್ಮ ಸ್ವಾರ್ಥ ಮತ್ತು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಅಕ್ರಮ ಮತ್ತು ಕಾನೂನು ಬಾಹಿರ. ಹೀಗಾಗಿ, ಈ ಪ್ರಕರಣ ಇತ್ಯರ್ಥವಾಗುವವರೆಗೂ ಸಾಧನಾ ಸಮಾವೇಶಕ್ಕೆ ಹಣ ಬಿಡುಗಡೆ ಮಾಡದಂತೆ ತಡೆ ನೀಡಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಸಾಧನಾ ಸಮಾವೇಶಕ್ಕೆ ಸಾರ್ವಜನಿಕರ ಹಣವನ್ನು ಖರ್ಚು ಮಾಡಿರುವ ಬಗ್ಗೆ ಅಧಿಕೃತ ದಾಖಲೆಯ ವಿವರಣೆಯನ್ನು ಒದಗಿಸಲು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.







