ಲೋಕಸಭೆಯೊಳಗೆ ‘ಭಾರತ್ ಮಾತಾ ಕೀ ಜೈ’ ಎಂದ ವ್ಯಕ್ತಿ!

ಹೊಸದಿಲ್ಲಿ, ಜ.5: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಸಂದರ್ಶಕರ ಸಾಲಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಘೋಷಣೆಗಳನ್ನು ಕೂಗಿದ ಘಟನೆ ಶುಕ್ರವಾರ ನಡೆದಿದ್ದು ಕೂಡಲೇ ಆತನನ್ನು ಭದ್ರತಾ ಸಿಬ್ಬಂದಿ ಹೊರಗೆ ಕಳುಹಿಸಿದ್ದಾರೆ ಎಂದು ಆಂಗ್ಲ ಪತ್ರಿಕೆ ವರದಿ ಮಾಡಿದೆ.
ಬೆಳಿಗ್ಗೆ ಸುಮಾರು 11.30ರ ಸುಮಾರಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ರೈತರ ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿ ಕುಳಿತುಕೊಳ್ಳುತ್ತಿದ್ದಂತೆ ಗ್ಯಾಲರಿಯಲ್ಲಿ ಕುಳಿತ ವ್ಯಕ್ತಿಯೊಬ್ಬ ಎರಡು ಬಾರಿ ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗಿದ್ದಾನೆ. ಕೂಡಲೇ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಸದನದಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಸದನದಲ್ಲಿ ಹಾಜರಿದ್ದ ಬಹುತೇಕ ಸದಸ್ಯರಿಗೆ ಈ ಘಟನೆ ಅರಿವಿಗೆ ಬಾರದ ಕಾರಣ ಸದನದ ಪ್ರಕ್ರಿಯೆಗೆ ಯಾವುದೇ ರೀತಿಯ ಅಡಚಣೆಯಾಗಲಿಲ್ಲ ಎಂದು ವರದಿ ತಿಳಿಸಿದೆ.
ಸದ್ಯ ಘೋಷಣೆ ಕೂಗಿದ ವ್ಯಕ್ತಿ ಯಾರೆಂಬ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಆತನಿಗೆ ಎಚ್ಚರಿಕೆ ನೀಡಿ ಬಿಡಬೇಕೇ ಅಥವಾ ದಿಲ್ಲಿ ಪೊಲೀಸರು ಆತನ ವಿರುದ್ಧ ದೂರು ದಾಖಲಿಸಿಕೊಳ್ಳಬೇಕೇ ಎಂಬ ಬಗ್ಗೆ ಸಭಾಪತಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಭದ್ರತಾ ಸಿಬ್ಬಂದಿ ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.
ಭದ್ರತೆಯ ದೃಷ್ಟಿಯಿಂದ ಸಂದರ್ಶಕರ ಛಾವಣಿಯಲ್ಲಿ ಮೊದಲ ಎರಡು ಸಾಲುಗಳಲ್ಲಿ ಭದ್ರತಾ ಸಿಬ್ಬಂದಿಯೇ ಸಾಮಾನ್ಯ ಬಟ್ಟೆಯನ್ನು ಧರಿಸಿ ಕುಳಿತಿರುತ್ತಾರೆ. 2016ರ ನವೆಂಬರ್ 25ರಂದು ವ್ಯಕ್ತಿಯೊಬ್ಬ ಸಂದರ್ಶಕರ ಛಾವಣಿಯಿಂದ ಲೋಕಸಭಾ ಚೇಂಬರ್ ಒಳಗೆ ಹಾರಲು ಪ್ರಯತ್ನಿಸಿದಾಗ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಹಿಂದಕ್ಕೆಳೆದಿದ್ದರು.