ಪಿಂಕಿ ನವಾಝ್ ಬಿಜೆಪಿ ಕಾರ್ಯಕರ್ತನಲ್ಲ: ಮಾಜಿ ಸಚಿವ ಕೃಷ್ಣಾ ಜೆ. ಪಾಲೇಮಾರ್

ಮಂಗಳೂರು, ಜ. 5: ದೀಪಕ್ ರಾವ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ನವಾಝ್ ಬಿಜೆಪಿಯ ಕಾರ್ಯಕರ್ತನೆಂದು ಸ್ಥಳೀಯ ಶಾಸಕರು ಆರೋಪಿಸಿರುವುದು ಸತ್ಯಕ್ಕೆ ದೂರವಾದುದು. ಆತ ಬಿಜೆಪಿಯ ಅಲ್ಪ ಸಂಖ್ಯಾತ ಮೋರ್ಛಾ ಅಥವಾ ಇತರ ಯಾವೂದೇ ಘಟಕದ ಕಾರ್ಯಕರ್ತನಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಕೃಷ್ಣಾ ಜೆ. ಪಾಲೇಮಾರ್ ಸುದ್ದಿಗೊಷ್ಠಿಯಲ್ಲಿಂದು ಸ್ಪಷ್ಟಪಡಿಸಿದ್ದಾರೆ.
ಸುರತ್ಕಲ್ ಪರಿಸರದಲ್ಲಿ ಕಾನೂನು ಸುವ್ಯವಸ್ಥೆ ಹದ ಗೆಟ್ಟಿದೆ. ಮಾದಕ ದ್ರವ್ಯ ವ್ಯಸನಿಗಳು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆ. ದ್ವಿಚಕ್ರ ಸವಾರರು ತಲೆಗೆ ಹೆಲ್ಮೆಟ್ ಧರಿಸಿ ಸಂಚರಿಸುವುದು ಅಪರೂಪವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಯಾವೂದೇ ಕ್ರಮ ಕೈಗೊಳ್ಳುತ್ತಿಲ್ಲ, ಗೋ ಕಳ್ಳತನ ನಡೆಯುತ್ತಿದೆ. ಗೋ ಕಳ್ಳರಿಗೆ ರಕ್ಷಣೆ ನೀಡುವ ಕೆಲಸ, ಅವರ ಕುಟುಂಬಕ್ಕೆ ಪರಿಹಾರ ಒದಗಿಸಿರುವುದು ನಡೆದಿದೆ. ತನಿಖೆಯ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿರುವವರ ಬಗ್ಗೆ ಮತ್ತು ಸಮಗ್ರ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಪಾಲೇಮಾರ್ ತಿಳಿಸಿದ್ದಾರೆ.
ದೀಪಕ್ ರಾವ್ ಕೊಲೆಯಾದ ಬಳಿಕ ಆತನ ಶವವನ್ನು ತೆಗೆದುಕೊಂಡು ಹೋಗಲು ಬಂದಿರುವವರನ್ನು ದಾರಿ ತಪ್ಪಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ನಿಗದಿಯಾದ ಸಮಯಕ್ಕಿಂತ ಮುಂಚಿತವಾಗಿ ಬೇರೆ ದಾರಿಯಿಂದ ಆಸ್ಪತ್ರೆಯ ಬಳಿ ಕುಟುಂಬದ ಸದಸ್ಯರಿಗೆ, ಗ್ರಾಮಸ್ಥರಿಗೂ ಮಾಹಿತಿ ನೀಡದೆ ದೀಪಕ್ ರಾವ್ ಮನೆಗೆ ತಲುಪಿಸಿದ್ದಾರೆ. ಈ ಬಗ್ಗೆ ಮತ್ತು ಇದಕ್ಕೆ ಯಾರು ಕುಮ್ಮಕ್ಕು ನೀಡಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಬೇಕು ಎಂದು ಪಾಲೇಮಾರ್ ಆಗ್ರಹಿಸಿದ್ದಾರೆ.
ಯಾವೂದೇ ಆಧಾರವಿಲ್ಲದೆ ಬಿಜೆಪಿ ಪಕ್ಷದ ಮೇಲೆ ಬೇಜವಾಬ್ದಾರಿಯುತವಾಗಿ ಹೇಳಿಕೆ ನೀಡುತ್ತಿರುವ ಶಾಸಕರ ಸಾಭೀತು ಪಡಿಸುವವರೆಗೆ ಅವರ ಮನೆಯ ಮುಂದೆ ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಮುಖಂಡ ಉಮಾನಾಥ ಕೊಟ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬ್ರಿಜೇಶ್ ಚೌಟ, ಭಾಸ್ಕರ ಚಂದ್ರ ಶೆಟ್ಟಿ, ಡಾ. ಭರತ್ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷ ಶಹನಾವಾಝ್ ಮೊದಲಾದವರು ಉಪಸ್ಥಿತರಿದ್ದರು.







