ಬೆಂಗಳೂರಲ್ಲಿ ಕುಳಿತು ಮಜಾ ಮಾಡುತ್ತಿಲ್ಲ; ಟೀಕಾಕಾರರಿಗೆ ಅಂಬರೀಶ್ ತಿರುಗೇಟು

ಮಂಡ್ಯ, ಜ.5: ನಾನು ಬೆಂಗಳೂರಿನಲ್ಲಿ ಕುಳಿತು ಮಜಾ ಮಾಡುತ್ತಿಲ್ಲ, ಜಿಲ್ಲೆಯ ಎಲ್ಲ ವಿದ್ಯಮಾನಗಳನ್ನು ತಿಳಿದುಕೊಂಡು ಬಂದಿದ್ದೇನೆ. ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ಕಡೆಗಣಿಸಿಲ್ಲ ಎಂಬುದಾಗಿ ಮಾಜಿ ಸಚಿವ, ಶಾಸಕ ಅಂಬರೀಶ್ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಬಹಳ ತಿಂಗಳ ನಂತರ ಶುಕ್ರವಾರ ನಗರಕ್ಕೆ ಆಗಮಿಸಿ ನಗರಸಭೆ ವತಿಯಿಂದ ಆಯೋಜಿಸಿದ್ದ ವಿವಿಧ ಸವಲತ್ತು ವಿತರಣೆ ಹಾಗು ವಿವಿಧ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಚಿವನಾಗಿ, ಶಾಸಕನಾಗಿ ಜಿಲ್ಲೆ ಮತ್ತು ಕ್ಷೇತ್ರದಲ್ಲಿ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಇದು ನನ್ನೊಬ್ಬನಿಂದ ಆಗಿದೆ ಎಂದು ಹೇಳುವುದಿಲ್ಲ, ನಮ್ಮ ಸರಕಾರದಿಂದ ಆಗಿದೆ ಎಂದು ಅವರು ವಿವರಿಸಿದರು.
ರಾಜ್ಯಕ್ಕೆ ಮಾದರಿಯಾದ ಅಂಬೇಡ್ಕರ್ ಭವನ, ಒಳಾಂಗಣ ಕ್ರೀಡಾಂಗಣ, ಕೆರಗೋಡು ಮಾರ್ಗದ ರಸ್ತೆ ಅಭಿವೃದ್ಧಿ, ಮಾರುಕಟ್ಟೆ, ಇನ್ನೂ ಹಲವು ಕಾಮಗಾರಿಗಳು ತನ್ನ ಅವಧಿಯಲ್ಲೇ ಆಗಿವೆ ಎಂದು ಹೇಳಿದರು. ಟೀಕಿಸುವವರು, ಹೊಗಳುವವರು ಇರುತ್ತಾರೆ. ಅದೆಲ್ಲವನ್ನೂ ಸಮನಾಗಿ ತೆಗೆದುಕೊಂಡು ಕರ್ತವ್ಯಕ್ಕೆ ಆದ್ಯತೆ ನೀಡಿದ್ದೇನೆ. ವಸತಿ ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಪರಿಣಾಮ ಇಲಾಖೆ ರಾಷ್ಟ್ರದಲ್ಲಿ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿತು ಎಂದು ಅವರು ತಿಳಿಸಿದರು.
ಅಂಬೇಡ್ಕರ್ ಭವನ, ಒಳ ಕ್ರೀಡಾಂಗಣ, ಕೆರಗೋಡು ರಸ್ತೆ ಅಭಿವೃದ್ಧಿ ಬಹುತೇಕ ಪೂರ್ಣಗೊಂಡಿದ್ದು, ಮುಖ್ಯಮಂತ್ರಿಗಳಿಂದ ಲೋಕಾರ್ಪಣೆಗೊಳ್ಳಲಿವೆ. ನಗರದ ಸ್ಲಂ ಜನರಿಗೆ ಸುಸಜ್ಜಿತ ಮನೆಗಳು ಸಿದ್ದವಾಗತೊಡಗಿವೆ ಎಂದು ಅಂಬರೀಶ್ ಮಾಹಿತಿ ನೀಡಿದರು.
ಬಹುಗ್ರಾಮ ಯೋಜನೆಯಡಿ ಕ್ಷೇತ್ರದ 392 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಿಗೆ ಎಲ್ಲ ಪ್ರಕ್ರಿಯೆ ಮುಗಿದಿದ್ದು, ಸಚಿವ ಸಂಪುಟ ಒಪ್ಪಿಗೆ ದೊರೆತ ಕೂಡಲೇ ಕಾಮಗಾರಿ ಆರಂಭವಾಗಲಿದೆ. ನಗರದ ವಾಹನ ದಟ್ಟಣೆ ತಡೆಗೆ ಬೈಪಾಸ್ ರಸ್ತೆ ನಿರ್ಮಾಣವೂ ಆಗಲಿದೆ ಎಂದು ಅವರು ತಿಳಿಸಿದರು.
ಅಮೃತ ಭವನ, ಪೌರಕಾರ್ಮಿಕರ ಬಹುಮಹಡಿ ವಸತಿ ಸಂಕೀರ್ಣ, ವಿಕೇಂದ್ರೀಕೃತ ಶೂನ್ಯ ಕಸ ನಿರ್ವಹಣಾ ಘಟಕ, ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸವಲತ್ತುಗಳನ್ನು ಅಂಬರೀಶ್ ವಿತರಿಸಿದರು.
ನಗರಸಭಾಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಉಪಾಧ್ಯಕ್ಷೆ ಸುಜಾತಮಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಧುಸೂದನ್, ಆನಂದ್, ಸದಸ್ಯರು, ಮುಡಾ ಅಧ್ಯಕ್ಷ ಮುನಾವರ್ ಖಾನ್, ಅಮರಾವತಿ ಚಂದ್ರಶೇಖರ್, ಇತರ ಮುಖಂಡರು ಉಪಸ್ಥಿತರಿದ್ದರು.
“ಇಷ್ಟು ಒಳ್ಳೆಯ ಕೆಲಸ ಮಾಡಿರುವುದನ್ನು ಮಾಧ್ಯಮ ಮಿತ್ರರು ಹೇಳಬೇಕು. ತಪ್ಪು ಇದ್ದರೂ ಹೇಳಿ, ಆದರೆ, ಅದಕ್ಕಿಂತ ಎಷ್ಟು ಒಳ್ಳೆಯದು ಮಾಡಿದ್ದೀನಿ ಎಂಬುವುದು ಹೇಳಿದ್ರೆ ಸಂತೋಷವಾಗುತ್ತೆ”-ಅಂಬರೀಶ್.







