ಆಧಾರ್ ದತ್ತಾಂಶಗಳ ಕಳವು ಮತ್ತು ದುರ್ಬಳಕೆ ಸಾಧ್ಯ
ಅಮೆರಿಕದ ವಿಸಲ್ ಬ್ಲೋವರ್ ಸ್ನೋಡೆನ್ ಎಚ್ಚರಿಕೆ

ವಾಷಿಂಗ್ಟನ್,ಜ.5: ಭಾರತ ಸರಕಾರದ ಆಧಾರ್ ಮಾಹಿತಿ ಕೋಶಕ್ಕೆ ಕನ್ನ ಹಾಕಬಹುದಾಗಿದೆ ಮತ್ತು ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಅಮೆರಿಕದ ವಿಸಲ್ ಬ್ಲೋವರ್ ಎಡ್ವರ್ಡ್ ಸ್ನೋಡೆನ್ ಶುಕ್ರವಾರ ಹೇಳಿದ್ದಾರೆ. ಆಧಾರ್ ಮಾಹಿತಿ ಕೋಶದ ಯಾವುದೇ ಉಲ್ಲಂಘನೆಯನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಗುರುವಾರವಷ್ಟೇ ನಿರಾಕರಿಸಿತ್ತು.
ಭಾರತದಲ್ಲಿ ಆಧಾರ್ ಮಾಹಿತಿಗಳ ಸೋರಿಕೆ ಕುರಿತು ಸಿಬಿಎಸ್ ಪತ್ರಕರ್ತ ಝಾಕ್ ವಿಟೇಕರ್ ಅವರ ಪ್ರತಿಕ್ರಿಯೆಗೆ ರಿಟ್ವೀಟ್ ಮಾಡಿರುವ ಸ್ನೋಡೆನ್, ಖಾಸಗಿ ವ್ಯಕ್ತಿಗಳ ಪರಿಪೂರ್ಣ ಮಾಹಿತಿಗಳನ್ನು ಅಪೇಕ್ಷಿಸುವುದು ಸರಕಾರಗಳ ಸಹಜ ಪ್ರವೃತ್ತಿಯಾಗಿದೆ. ಆದರೆ ಇಂತಹ ಮಾಹಿತಿಗಳಿಗೆ ಕನ್ನ ಹಾಕುವುದನ್ನು ಯಾವುದೇ ಕಾನೂನು ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಇತಿಹಾಸವು ತೋರಿಸಿದೆ ಮತ್ತು ಅಂತಿಮವಾಗಿ ಈ ಮಾಹಿತಿಗಳು ದುರ್ಬಳಕೆಯಾಗುತ್ತವೆ ಎಂದು ಹೇಳಿದರು.
ಭಾರತವು ತನ್ನ ಸುಮಾರು 1.2 ಶತಕೋಟಿ ಪ್ರಜೆಗಳ ಖಾಸಗಿ ಮಾಹಿತಿಗಳನ್ನೊಳ ಗೊಂಡಿರುವ ಆಧಾರ್ ಮಾಹಿತಿ ಕೋಶವನ್ನು ಹೊಂದಿದೆ. ಅಡ್ಮಿನ್ ಖಾತೆಗಳನ್ನು ಸೃಷ್ಟಿಸಬಹುದಾಗಿದೆ ಮತ್ತು ಅವುಗಳನ್ನು ಮಾರಾಟ ಮಾಡಬಹುದಾಗಿದೆ ಎಂದು ಬಝ್‌ಫೀಡ್ ವರದಿ ಮಾಡಿದೆ ಎಂದು ವಿಟೇಕರ್ ಈ ಮೊದಲು ಟ್ವೀಟಿಸಿದ್ದರು.
ಬಯೊಮೆಟ್ರಿಕ್ ದಾಖಲೆಗಳು ಸೇರಿದಂತೆ ಆಧಾರ್ ಮಾಹಿತಿ ಕೋಶವು ಸಂಪೂರ್ಣ ವಾಗಿ ಸುರಕ್ಷಿತವಾಗಿದೆ ಎಂದು ಯುಐಡಿಎಐ ಗುರುವಾರ ಸ್ಪಷ್ಟನೆ ನೀಡಿತ್ತು. ಕೇವಲ 500 ರೂ.ಗಳನ್ನು ನೀಡಿ 10 ನಿಮಿಷಗಳಲ್ಲಿ ಶತಕೋಟಿ ಆಧಾರ್ ಮಾಹಿತಿಗಳಿಗೆ ಕನ್ನ ಹಾಕಬಹುದು ಎಂದು ‘ದಿ ಟ್ರಿಬ್ಯೂನ್ ’ಪ್ರಕಟಿಸಿದ್ದ ವರದಿಯು ತಪ್ಪು ವರದಿಗಾರಿಕೆಯ ಪ್ರಕರಣವಾಗಿದೆ ಎಂದು ಬಣ್ಣಿಸಿದ್ದ ಅದು, ಯಾವುದೇ ಆಧಾರ್ ಮಾಹಿತಿ ಸೋರಿಕೆ ಯಾಗಿಲ್ಲ ಎಂದು ಹೇಳಿಕೆಯೊಂದರಲ್ಲಿ ತಿಳಿಸಿತ್ತು.
ಖಾಸಗಿತನದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿ ಆಧಾರ್‌ನ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯನ್ನು ಆರಂಭಿಸಲು ಸರ್ವೋಚ್ಚ ನ್ಯಾಯಾಲಯವು ಜ.17ರ ಮುಹೂರ್ತವನ್ನು ನಿಗದಿ ಪಡಿಸಿರುವಾಗಲೇ ಈ ಬೆಳವಣಿಗೆ ನಡೆದಿದೆ.
ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಆಗಸ್ಟ್‌ನಲ್ಲಿ ಸಂವಿಧಾನದಡಿ ಖಾಸಗಿತನವು ಮೂಲಭೂತ ಹಕ್ಕು ಆಗಿದೆ ಎನ್ನುವುದನ್ನು ಎತ್ತಿ ಹಿಡಿದಿತ್ತು.







