ಮಕ್ಕಳ ಹಕ್ಕು ಪವಿತ್ರ: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಜ. 5: ಪಶ್ಚಿಮಬಂಗಾಳದ ಅನಾಥಾಲಯಗಳಿಂದ ಮಕ್ಕಳನ್ನು ಸಾಗಾಟ ಮಾಡುವ ಕುರಿತು ಆತಂಕ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಗುರುವಾರ ನೋಟಿಸ್ ಜಾರಿ ಮಾಡಿದೆ.
ಅನಾಥ ಮಕ್ಕಳ ಹಕ್ಕನ್ನು ಪಶ್ಚಿಮಬಂಗಾಳ ಸರಕಾರ ಅತಿ ಹೆಚ್ಚು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಎರಡು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.
ಸಮಾಜದಲ್ಲಿ ಮಕ್ಕಳ ಹಕ್ಕು ಪವಿತ್ರವಾದುದು. ದೇಶದ ಭವಿಷ್ಯ ಮಕ್ಕಳ ನಡವಳಿಕೆ ಹಾಗೂ ಮಗುವಿನ ಭವಿಷ್ಯವನ್ನು ಅವಲಂಬಿಸಿದೆ. ಅಂತಹ ಭವಿಷ್ಯ ಹಾಗೂ ನಡವಳಿಕೆ ರಕ್ಷಿಸುವಲ್ಲಿ ರಾಜ್ಯಕ್ಕೆ ಅತಿ ದೊಡ್ಡ ಪಾತ್ರ ಇದೆ ಎಂದು ಅವರು ಹೇಳಿದರು.
ಮಕ್ಕಳನ್ನು ಮಾರಾಟ ಮಾಡುವಷ್ಟು ಹೆಚ್ಚು ಘೋರವಾದ ವಿಷಯ ಬೇರೇನೂ ಇಲ್ಲ. ಆದುದರಿಂದ ಈ ಸಂಪೂರ್ಣ ವಿಷಯದ ಕುರಿತ ಸಮಗ್ರ ನೋಟದ ಅಗತ್ಯತೆ ಇದೆ ಎಂದರು.
ಎನ್‌ಸಿಪಿಸಿಆರ್ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 1993ರ ಕಾಯ್ದೆ ಅಡಿಯಲ್ಲಿ ಕಡ್ಡಾಯವಾದರೂ ಯಾವುದೇ ರಾಜ್ಯ ಮಾನವ ಹಕ್ಕು ನ್ಯಾಯಾಲಯ ಸ್ಥಾಪಿಸಿಲ್ಲ ಎಂದು ಪೀಠಕ್ಕೆ ಮಾಹಿತಿ ನೀಡಿದರು.