ಬೆಂಗಳೂರಿನಲ್ಲಿ ಹಕ್ಕಿಜ್ವರ: ಕೇಂದ್ರದಿಂದ ದೃಢ

ಹೊಸದಿಲ್ಲಿ, ಜ.5: ಬೆಂಗಳೂರಿನ ದಾಸರಹಳ್ಳಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವುದನ್ನು ಕೇಂದ್ರ ಸರಕಾರ ದೃಢಪಡಿಸಿದ್ದು, ರೋಗವನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರಕ್ಕೆ ನೆರವಾಗುವ ಸಲುವಾಗಿ ಕೇಂದ್ರದಿಂದ ತಂಡವೊಂದನ್ನು ರವಾನಿಸಿರುವುದಾಗಿ ತಿಳಿಸಿದೆ.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿರುವ ಅಧಿಕಾರಿಗಳು ಈ ಬಗ್ಗೆ ಕರ್ನಾಟಕ ಅಥವಾ ದೇಶದ ಇನ್ಯಾವುದೇ ಭಾಗದಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿಸಿದ್ದಾರೆ.
ಭೋಪಾಲ್ ಮೂಲದ ರಾಷ್ಟ್ರೀಯ ಅತಿಭದ್ರತಾ ಪಶು ರೋಗಗಳ ಸಂಸ್ಥೆ (ಎನ್‌ಐಎಚ್‌ಎಸ್‌ಎಡಿ)ಗೆ ರಾಜ್ಯವು ಕಳುಹಿಸಿದ್ದ ಮಾದರಿಗಳಲ್ಲಿ ಹಕ್ಕಿಜ್ವರದ ವೈರಾಣುಗಳಿರುವುದು ದೃಢಪಟ್ಟಿರುವ ಬಗ್ಗೆ ಸಂಸ್ಥೆಯು ಡಿಸೆಂಬರ್ 30ರಂದು ತಿಳಿಸಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಈ ಬಗ್ಗೆ ರಾಜ್ಯ ಸರಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ರಾಜ್ಯ ಸರಕಾರವು ಹಕ್ಕಿಜ್ವರ ಕಾಣಿಸಿಕೊಂಡಿರುವ ಬಗ್ಗೆ ಹೇಳಿಕೆ ನೀಡಿದ್ದು, ಅದನ್ನು ನಿಯಂತ್ರಿಸುವ ಕಾರ್ಯಾಚರಣೆಯನ್ನು ಆರಂಭಿಸಿದೆ ಎಂದು ಸಚಿವಾಲಯ ತಿಳಿಸಿದೆ. ರಾಜ್ಯ ಸರಕಾರದ ನೆರವಿಗಾಗಿ ಎರಡು ತಜ್ಞರನ್ನೊಳಗೊಂಡ ಕೇಂದ್ರದ ತಂಡವನ್ನು ಈಗಾಗಲೇ ರವಾನಿಸಿರುವುದಾಗಿ ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಕ್ಕಿಜ್ವರ ಒಂದು ವೈರಾಣು ಸೋಂಕು ಆಗಿದ್ದು, ಮೊದಲಿಗೆ ಕೋಳಿ ಹಾಗೂ ಇತರ ಹಕ್ಕಿಗಳಿಗೆ ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.