ಗುಂಡ್ಲುಪೇಟೆ: ಎಚ್.ಎಸ್.ಮಹದೇವಪ್ರಸಾದ್ ಪ್ರಥಮ ವರ್ಷದ ಪುಣ್ಯ ಸ್ಮರಣೆ

ಗುಂಡ್ಲುಪೇಟೆ,ಜ.5: ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಉದ್ಯಮಿ ಹಾಗೂ ಕಾಂಗ್ರೆಸ್ ಯುವ ಮುಖಂಡ ಹಿರಿಕಾಟಿ ಆರ್. ಯಶವಂತಕುಮಾರ್ ಅನ್ನಸಂತರ್ಪಣೆ ಮಾಡಿದರು.
ತಾಲೂಕಿನ ಹಿರಿಕಾಟಿ ಗ್ರಾಮದ ಸಮೀಪವಿರುವ ಪೆಟ್ರೋಲ್ ಬಂಕ್ ಬಳಿ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು. ಕೆಲಕಾಲ ಮೌನಾಚರಣೆ ಆಚರಿಸಿ ಪ್ರಸಾದ್ ಆತ್ಮಕ್ಕೆ ಶಾಂತಿಕೋರಿದರು.
ನಂತರ ಮಾತನಾಡಿದ ಯಶವಂತಕುಮಾರ್, ಮಹದೇವಪ್ರಸಾದ್ ದೀನದಲಿತರ ಧ್ವನಿಯಾಗಿದ್ದರು. ಹಾಗಾಗಿ ಸತತ 5 ಬಾರಿ ಕ್ಷೇತ್ರದ ಮತದಾರರು ಗೆಲ್ಲಿಸಿ ಸೋಲಿಲ್ಲದ ಸರದಾರ ಎಂಬ ಬಿರುದು ನೀಡಿದ್ದರು. ಗುಂಡ್ಲುಪೇಟೆ ಕ್ಷೇತ್ರವನ್ನು ಮಾದರಿಯನ್ನಾಗಿಸಲು ಅವಿರತ ಪ್ರಯತ್ನ ಮಾಡಿ ಹಗಲು ರಾತ್ರಿ ಶ್ರಮಿಸಿ ಅಭಿವೃದ್ದಿಯ ಪರ್ವವನ್ನೆ ಸೃಷ್ಟಿಸಿದ್ದಾರೆ. ಇಡೀ ರಾಜ್ಯದ ಕಣ್ಮಣಿಯಾಗಿದ್ದ ಅವರು ನಮ್ಮನ್ನು ಬಿಟ್ಟು ಅಗಲಿರುವುದು ಅಪಾರ ನೋವನ್ನು ತಂದಿದೆ ಎಂದರು.
ಈ ಸಂದರ್ಭದಲ್ಲಿ ಮಹದೇವಪ್ರಸಾದ್ ಅಭಿಮಾನಿಗಳು, ಹಿರಿಕಾಟಿ ಗ್ರಾಮದ ಕಾರ್ಯಕರ್ತರು ಉಪಸ್ಥಿತರಿದ್ದರು.





