ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ ಪ್ರವಾದಿ ಸಂದೇಶ ಕಾರ್ಯಕ್ರಮ

ಮಂಗಳೂರು, ಜ.5: ನಗರದ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ ವತಿಯಿಂದ ಪ್ರವಾದಿ ಸಂದೇಶ ಕಾರ್ಯಕ್ರಮವು ಶುಕ್ರವಾರ ನಗರದ ಪುರಭವನದಲ್ಲಿ ಜರಗಿತು.
‘ಇಸ್ಲಾಂ ಯುವ ಪೀಳಿಗೆಯಿಂದ ಏನನ್ನು ನಿರೀಕ್ಷಿಸುತ್ತಿವೆ ?’ ಎಂಬ ವಿಷಯದ ಕುರಿತು ಮಾತನಾಡಿದ ಐಆರ್‌ಸಿ ಅಧ್ಯಕ್ಷ, ನ್ಯಾಯವಾದಿ ಫೈಝ್ ಸೈಯದ್ ಯುವ ಜನಾಂಗ ಮೋಜಿ ಮಸ್ತಿನಲ್ಲಿ ಕಾಲ ಹರಣ ಮಾಡದೆ ಧಾರ್ಮಿಕ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಇಹಲೋಕದ ಆಸೆಗಾಗಿ ಪರಲೋಕವನ್ನು ಮರೆಯಾರದು ಎಂದು ಅವರು ಹೇಳಿದರು.
ಅಮಲು ಪದಾರ್ಥಗಳ ಸೇವನೆ, ವಿವಾಹ ಪೂರ್ವ ಸಂಬಂಧ ಹಾಗೂ ದುಂದುವೆಚ್ಚದಿಂದ ದೂರವಾಗಬೇಕು. ಆಧುನಿಕ ತಂತ್ರಜ್ಞಾನವನ್ನು ಒಳಿತಿಗೆ ಬಳಸಿಕೊಳ್ಳುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದು ಸಮುದಾಯದ ಆದ್ಯ ಕರ್ತವ್ಯವಾಗಬೇಕು. ಹಾಗೆಯೇ ಎಲ್ಲರೂ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಅಧ್ಯಕ್ಷ ನಾಝಿಮ್ ಎಸ್.ಎಸ್. ಕಾಯರ್ಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಕ್ರಮದ ಸಂಚಾಲಕ ಮುಹಮ್ಮದ್ ರಿಝ್ವಾನ್ ಉಪಸ್ಥಿತರಿದ್ದರು. ಮುಹಮ್ಮದ್ ಇಸ್ಮಾಯೀಲ್ ರಹೀದ್ ಕಿರಾಅತ್ ಪಠಿಸಿದರು. ಅಬ್ದುಲ್ ಬಾಸಿತ್ ಹುಸೈನ್ ಸ್ವಾಗತಿಸಿದರು. ಬಿಲಾಲ್ ವಂದಿಸಿದರು. ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.
ಹಂತಕರಿಗೆ ಧರ್ಮವಿಲ್ಲ: ಉಮರ್ ಶರೀಫ್
‘ಮನುಕುಲದ ಮಾರ್ಗದರ್ಶಕ ಪ್ರವಾದಿ ಮುಹಮ್ಮದ್ (ಸ)’ ಎಂಬ ವಿಷಯದ ಕುರಿತು ಮಾತನಾಡಿದ ಡಿಸ್ಕವರ್ ಇಸ್ಲಾಮ್ ಎಜುಕೇಶನಲ್ ಟ್ರಸ್ಟ್‌ನ ಸಿಇಒ ಉಮರ್ ಶರೀಫ್, ಪ್ರವಾದಿ ಮುಹಮ್ಮದ್ ಮಾನವೀಯತೆಗೆ ಹೆಚ್ಚು ಒತ್ತು ಕೊಟ್ಟವರು. ಧಾರ್ಮಿಕ ಕೇಂದ್ರಗಳಿಗಿಂತ ಮಾನವ ಜೀವಕ್ಕೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಹಾಗಾಗಿ ದೀಪಕ್ ರಾವ್ ಅವರನ್ನು ಕೊಂದವರು ಮುಸ್ಲಿಮರಲ್ಲ. ಹಾಗೆಯೇ ಮುಬ್ಬಶಿರ್, ಬಶೀರ್ ಮೇಲೆ ದಾಳಿ ನಡೆಸಿದವರಿಗೂ ಧರ್ಮವಿಲ್ಲ. ಅವರೆಲ್ಲರೂ ಶೈತಾನರು. ಹೆಸರಿನ ಆಧಾರದ ಮೇಲೆ ಅಪರಾಧಿಗಳನ್ನು ಗುರುತಿಸುವುದು ಸರಿಯಲ್ಲ ಎಂದು ಹೇಳಿದರು.







