ಅಕ್ರಮ ಕಲ್ಲುಗಣಿಗಾರಿಕೆಗೆ ದಾಳಿ: ನಾಲ್ಕು ಪ್ರಕರಣ ದಾಖಲು
ಕಾರ್ಕಳ, ಜ.5: ಕಾರ್ಕಳ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಐದು ಕಡೆಗಳಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಗೆ ಉಡುಪಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ತಂಡ ಜ.2 ಮತ್ತು 3ರಂದು ದಾಳಿ ನಡೆಸಿದೆ.
ಸೂಡಾ ಗ್ರಾಮದಲ್ಲಿ ಸಿ.ಎಂ.ಜಾಯ್, ದಿನೇಶ್ ಅಮೀನ್, ಗೋಪಾಲ ಬಂಗೇರ, ದಿನೇಶ್ ಶೆಟ್ಟಿ ಎಂಬವರು ಕಲ್ಲು ಗಣಿಗಾರಿಕೆಗೆ ಪಡೆದ ಗುತ್ತಿಗೆಯ ಪರವಾನಿಗೆ ಮುಗಿದಿದ್ದರೂ ಸುಮಾರು 25,81,300ರೂ. ವೌಲ್ಯದ 15,550 ಮೆಟ್ರಿಕ್ ಟನ್ ಕಟ್ಟಡ ಕಲ್ಲು ತೆಗೆದು ಅಕ್ರಮ ಸಾಗಾಣಿಕೆ ಮಾಡಿರುವುದಾಗಿ ದೂರಲಾಗಿದೆ.
ಕೆದಿಂಜೆ ಗ್ರಾಮದ ಮಂಜರಪಲ್ಕೆ ಎಂಬಲ್ಲಿ ನಾಗರಾಜ ಮಂಜರಪಲ್ಕೆ, ಹರೀಶ್ ಪೂಜಾರಿ, ವಿನಾಯಕ ಕಾಮತ್, ದೀಪಕ್ ಕಾಮತ್ ಎಂಬವರು ಪಡೆದ ಕಲ್ಲು ಗಣಿ ಗುತ್ತಿಗೆಯ ಪರವಾನಿಗೆ 2011ಕ್ಕೆ ಮುಗಿದಿದ್ದರೂ ಸುಮಾರು 7,20,400ರೂ. ವೌಲ್ಯದ ಒಟ್ಟು 4300 ಮೆಟ್ರಿಕ್ ಟನ್ ಕಟ್ಟಡ ಕಲ್ಲು ಮತ್ತು 60 ಚಪ್ಪಡಿ ತೆಗೆದು ಅಕ್ರಮವಾಗಿ ಸಾಗಾಣಿಕೆ ಮಾಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಾಗಿದೆ.
ನಿಟ್ಟೆ ಗ್ರಾಮದ ಪರನೀರು ಪಾದೆ ಬಳಿ ಸುಂದರ ರಾವ್, ಈಶ್ವರ, ಗೋಪಾಲ, ಸುಬ್ರಹ್ಮಣ್ಯ, ಮಣಿ, ನಾಗರಾಜ, ಜಯಶೀಲ ಎಂಬವರು ಪಡೆದ ಕಲ್ಲು ಗಣಿಗುತ್ತಿಗೆಯ ಪರವಾನಿಗೆ 2011ಕ್ಕೆ ಮುಗಿದಿದ್ದರೂ ಕಟ್ಟಡ ಕಲ್ಲು ತೆಗೆದು ಅಕ್ರಮವಾಗಿ ಸಾಗಾಣಿಕೆ ಮಾಡಿರುವುದು ಕಂಡುಬಂದಿದೆ ಎಂದು ದೂರಲಾಗಿದೆ.
ಕುಕ್ಕುಂದೂರು ಗ್ರಾಮದಲ್ಲಿ ರವೀಂದ್ರ ಮಡಿವಾಳ, ಸತೀಶ್ ಕಿಣಿ, ಉಮೇಶ್ ಕಿಣಿ, ಭರತ್ ಶೆಟ್ಟಿ, ಅರುಣ್ ಶೆಟ್ಟಿ, ಸುಧಾಕರ ಶೆಟ್ಟಿ, ದೀಲಿಪ್, ವೃಷಭ ಕಡಂಬ, ರಘುನಾಥ ಶೆಟ್ಟಿ, ರುಕ್ಮಯ್ಯ ಶೆಟ್ಟಿಗಾರ್ ಎಂಬವರು ಯಾವುದೇ ಪರವಾನಿಗೆ ಇಲ್ಲದೆ ಸರಕಾರಿ ಸ್ಥಳದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ 1.05ಲಕ್ಷ ರೂ. ವೌಲ್ಯದ ಕಟ್ಟಡ ಕಲ್ಲುಗಳನ್ನು ಕಳವು ಮಾಡಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







