ಮಣಿಪಾಲ: ಆಝಾನ್ ಅಜೇಯ ತ್ರಿಶತಕ- ಎಂಎಸ್ಸಿಗೆ ಭಾರೀ ಜಯ

ಆಝಾನ್
ಮಣಿಪಾಲ, ಜ.5: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಮಾಹೆ ಕ್ರಿಕೆಟ್ ಮೈದಾನದಲಿ ಇಂದು ನಡೆದ 16 ವರ್ಷ ಕೆಳಗಿನವರ ಕ್ರಿಕೆಟ್ ಪಂದ್ಯಾಟದಲ್ಲಿ ಜುಗಲ್ ಸ್ಪೋರ್ಟ್ಸ್ ಕ್ಲಬ್ ತಂಡದೆದುರಿನ ಪಂದ್ಯದಲ್ಲಿ ಮಂಗಳೂರು ಸ್ಪೋರ್ಟ್ಸ್ ಕ್ಲಬ್ನ ಆರಂಭಿಕ ಆಟಗಾರ ಆಝಾನ್ ತೋಟಉಡುಪಿ ಅಮೋಘ ಆಟ ಪ್ರದರ್ಶಿಸಿ ಅಜೇಯ ತ್ರಿಶತಕ ದಾಖಲಿಸಿ ಅಪೂರ್ವ ಸಾಧನೆ ಮೆರೆದರು.
ಆಝಾನ್ ಅವರು 311 ರನ್ಗಳಿಸಿ ಅಜೇಯರಾಗಿ ಉಳಿದಿದ್ದು, ಮೈದಾನದ ಎಲ್ಲಾ ಮೂಲೆಗಳಿಗೂ ಚೆಂಡುಗಳನ್ನು ನಿರ್ಧಯವಾಗಿ ಅಟ್ಟಿ 15 ಸಿಕ್ಸರ್ ಹಾಗೂ 38 ಬೌಂಡರಿಗಳನ್ನು ಸಿಡಿಸಿದರು. ಸ್ಕೋರ್ 180 ರನ್ಗಳಾಗಿದ್ದಾಗ ಒಂದು ಜೀವದಾನ ಪಡೆದಿದ್ದ ಅವರು ತಂಡದ ಇನ್ನಿಂಗ್ಸ್ ಆರಂಭಿಸಿ ಕೊನೆಗೆ ಅಜೇಯರಾಗಿ ಪೆವಿಲಿಯನ್ಗೆ ಮರಳಿದರು.
ಒಟ್ಟು 200 ನಿಮಿಷಗಳ ಕಾಲ ಕ್ರೀಸ್ಬಳಿ ಇದ್ದ ಅವರು 160 ಚೆಂಡುಗಳನ್ನು ಎದುರಿಸಿದ್ದರು. ಈ ವೇಳೆ ಆಝಾನ್, ಮೊದಲ ವಿಕೆಟ್ಗೆ ಮ್ಯಾಕ್ನಿಲ್ (43) ಜೊತೆಗೆ 76, ಎರಡನೆ ವಿಕೆಟ್ಗೆ ಅರವಿಂದ್ (68) ಜೊತೆ 180, ಮೂರನೆ ವಿಕೆಟ್ಗೆ ಮ್ಯಾಕ್ಡಿಸೋಜ(ಅಜೇಯ 70) ಜೊತೆ ಮುರಿಯದ 302 ರನ್ಗಳ ಜೊತೆಯಾಟ ನೀಡಿದರು. ಇದರಿಂದ ಎಂಎಸ್ಸಿ ತಂಡ ನಿಗದಿತ 50 ಓವರುಗಳಲ್ಲಿ ಎರಡು ವಿಕೆಟ್ಗೆ 558 ರನ್ಗಳ ಬೃಹತ್ ಮೊತ್ತ ದಾಖಲಿಸಿತು.
ಅಸಾಧ್ಯವೆನಿಸಿದ್ದ ಈ ಮೊತ್ತವನ್ನು ಬೆನ್ನಟ್ಟಿದ ಜುಗಲ್ ಸ್ಪೋರ್ಟ್ಸ್ ಕ್ಲಬ್ ಕೇವಲ 44 ರನ್ಗಳಿಗೆ ಆಲೌಟಾಗುವ ಮೂಲಕ 514ರನ್ಗಳ ಬೃಹತ್ ಅಂತರದ ಸೋಲನನುಭವಿಸಿತು. ತಂಡ ವೇದಾಂತ್ 10ಕ್ಕೆ 5 ಹಾಗೂ ಅದ್ವಿತ್ 15ಕ್ಕೆ 3 ವಿಕೆಟ್ ಕಿತ್ತು ಮಿಂಚಿದರು. ಈ ವಿಜಯದೊಂದಿಗೆ ಮಂಗಳೂರು ಸ್ಪೋರ್ಟ್ಸ್ ಕ್ಲಬ್ ಪಂದ್ಯಾಟದ ಸೆಮಿಫೈನಲ್ ಪ್ರವೇಶಿಸಿದೆ.







