ಸಾಲ ಬಾಧೆ: ರೈತ ಆತ್ಮಹತ್ಯೆಗೆ ಶರಣು
ಶಿವಮೊಗ್ಗ, ಜ.5: ಸಾಲ ಬಾಧೆಯಿಂದ ಬೇಸತ್ತು ರೈತರೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಗಂಗೂರು ಗ್ರಾಮದಲ್ಲಿ ವರದಿಯಾಗಿದೆ.
ರಾಮಚಂದ್ರನಾಯ್ಕ್ (55) ಆತ್ಮಹತ್ಯೆ ಮಾಡಿಕೊಂಡ ರೈತ ಎಂದು ಗುರುತಿಸಲಾಗಿದೆ. ವಿಷ ಸೇವಿಸಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ರಾಮಚಂದ್ರನಾಯ್ಕ್ ರವರಿಗೆ ಒಂದು ಎಕರೆ ಜಮೀನಿದ್ದು, ಬತ್ತ ಬೆಳೆದಿದ್ದರು. ಬ್ಯಾಂಕ್ ಹಾಗೂ ಕೈಗಡವಾಗಿ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಜೊತೆಗೆ ರೋಗ ಬಾಧೆಯಿಂದ ಬತ್ತ ಬೆಳೆ ಕೂಡ ಹಾಳಾಗಿತ್ತು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





