ಟ್ರಂಪ್ ಆಡಳಿತದಿಂದ ಎಚ್-1ಬಿ ವೀಸಾ ನಿರ್ಬಂಧ: ಅಮೆರಿಕದ ಸಂಸದರ ವಿರೋಧ
ಭಾರತದ ಜೊತೆಗಿನ ಸಂಬಂಧಕ್ಕೆ ಪೆಟ್ಟು: ಎಚ್ಚರಿಕೆ

ವಾಶಿಂಗ್ಟನ್, ಜ. 5: ಎಚ್-1ಬಿ ವೀಸಾ ವಿಸ್ತರಣೆಯನ್ನು ನಿಲ್ಲಿಸುವ ಅಮೆರಿಕದ ಟ್ರಂಪ್ ಆಡಳಿತದ ಸಂಭಾವ್ಯ ಯೋಜನೆಯನ್ನು ಆ ದೇಶದ ಕೆಲವು ಸಂಸದರು ಟೀಕಿಸಿದ್ದಾರೆ ಹಾಗೂ ಈ ಕ್ರಮವು ಅಮೆರಿಕದಲ್ಲಿ ಪ್ರತಿಭೆಯ ಕೊರತೆಗೆ ಕಾರಣವಾಗಬಹುದು ಎಂದಿದ್ದಾರೆ.
ಅಮೆರಿಕವು ಈ ಯೋಜನೆಯನ್ನು ಜಾರಿಗೊಳಿಸಿದರೆ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ 5 ಲಕ್ಷದಿಂದ 7.5 ಲಕ್ಷವರೆಗಿನ ಭಾರತೀಯರು ಮನೆಗೆ ಮರಳಬೇಕಾಗುತ್ತದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರ ಅವಧಿಯಲ್ಲಿ ‘ಅಮೆರಿಕನ್ ಉತ್ಪನ್ನಗಳನ್ನು ಖರೀದಿಸಿ, ಅಮೆರಿಕನ್ನರನ್ನು ಕೆಲಸಕ್ಕೆ ನೇಮಿಸಿ’ (ಬಯ್ ಅಮೆರಿಕನ್, ಹಯರ್ ಅಮೆರಿಕನ್) ಎಂಬ ಘೋಷಣೆಯನ್ನು ಬಹುವಾಗಿ ಬಳಸಿದ್ದರು. ಆ ಘೋಷಣೆಗೆ ಅನುಗುಣವಾಗಿ ನೂತನ ಎಚ್-1ಬಿ ನೀತಿಯನ್ನು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿದೆ.
ಅರ್ಹ ಅಮೆರಿಕನ್ನರ ಕೊರತೆ ಇರುವ ಕ್ಷೇತ್ರಗಳಲ್ಲಿ ಕೆಲಸ ಮಾಡುವುದಕ್ಕಾಗಿ ಅತ್ಯಂತ ಪರಿಣತ ವಿದೇಶಿ ಕೆಲಸಗಾರರನ್ನು ನೇಮಿಸಲು ಎಚ್-1ಬಿ ವೀಸಾಗಳನ್ನು ಬಳಸಲಾಗುತ್ತಿದೆ.
ಆದರೆ, ಕಳೆದ ವರ್ಷದ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಂದಿನಿಂದ ಟ್ರಂಪ್ ಈ ಮಾದರಿಯ ವೀಸಾ ಯೋಜನೆಯ ಮೇಲೆ ಕೆಂಗಣ್ಣು ಬೀರುತ್ತಲೇ ಬಂದಿದ್ದಾರೆ.
ಕುಟುಂಬಗಳು ಒಡೆಯುತ್ತವೆ: ಸಂಸದರು
‘‘ಎಚ್-1ಬಿ ವೀಸಾದಾರರ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸುವುದರಿಂದ ಕುಟುಂಬಗಳು ಒಡೆಯುತ್ತವೆ, ನಮ್ಮ ಸಮಾಜದ ಪ್ರತಿಭೆ ಮತ್ತು ಪರಿಣತಿಯನ್ನು ಕಡಿಮೆ ಮಾಡುತ್ತದೆ ಹಾಗೂ ನಮ್ಮ ಮಹತ್ವದ ಭಾಗೀದಾರ ಭಾರತದೊಂದಿಗಿನ ಸಂಬಂಧವನ್ನು ಹಾಳು ಮಾಡುತ್ತದೆ’’ ಎಂದು ಡೆಮಾಕ್ರಟಿಕ್ ಪಕ್ಷದ ಕಾಂಗ್ರೆಸ್ ಸದಸ್ಯೆ ತುಳಸಿ ಗಬಾರ್ಡ್ ಹೇಳಿದ್ದಾರೆ.
ಅಮೆರಿಕದಲ್ಲಿ ಪ್ರಸ್ತುತ ರಿಪಬ್ಲಿಕನ್ ಪಕ್ಷದ ಆಡಳಿತವಿದೆ.
ಅದೇ ವೇಳೆ, ಗ್ರೀನ್ ಕಾರ್ಡ್ (ಅಮೆರಿಕ ಪೌರತ್ವ)ಗಾಗಿ ಅರ್ಜಿ ಸಲ್ಲಿಸಿದವರ ಎಚ್-1ಬಿ ವೀಸಾ ಅವಧಿಯನ್ನು ವಿಸ್ತರಿಸುವುದನ್ನು ನಿಷೇಧಿಸುವ ಟ್ರಂಪ್ ಆಡಳಿತದ ಪ್ರಸ್ತಾಪದ ಬಗ್ಗೆ ಹಿಂದೂ ಅಮೆರಿಕನ್ ಫೌಂಡೇಶನ್ (ಎಚ್‌ಎಎಫ್) ಕಳವಳ ವ್ಯಕ್ತಪಡಿಸಿದೆ.
ಅಮೆರಿಕನ್ನರಿಗೆ ಸುಧಾರಿತ ತರಬೇತಿ ನೀಡುವುದಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿರುವ ಭಾರತೀಯ-ಅಮೆರಿಕನ್ ಕಾಂಗ್ರೆಸ್ಸಿಗ ರಾಜ ಕೃಷ್ಣಮೂರ್ತಿ, ಎಚ್-1ಬಿ ವೀಸಾ ವಿಸ್ತರಣೆಯನ್ನು ನಿಲ್ಲಿಸುವುದರಿಂದ ಅಮೆರಿಕದ ಆರ್ಥಿಕತೆ ಕುಸಿಯುತ್ತದೆ ಹಾಗೂ ತಮ್ಮ ಇನ್ನಷ್ಟು ಕೆಲಸಗಳನ್ನು ವಿದೇಶಗಳಿಗೆ ನೀಡಲು ಕಂಪೆನಿಗಳನ್ನು ಪ್ರಚೋದಿಸುತ್ತದೆ ಎಂದಿದ್ದಾರೆ.







