ಮಂಗಳೂರು: ನ್ಯಾಯಾಂಗ ಆಡಳಿತದಲ್ಲಿ ತರಬೇತಿಗೆ ಅರ್ಜಿ ಆಹ್ವಾನ
ಮಂಗಳೂರು, ಜ.5: ದ.ಕ. ಜಿಲ್ಲೆಯಲ್ಲಿರುವ ಪ.ವರ್ಗದ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿಯನ್ನು ನೀಡಲು ಅರ್ಜಿಗಳನ್ನು ಕರೆಯಲಾಗಿದೆ. ಅಭ್ಯರ್ಥಿಯ ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ರೂ. ಮೀರಿರಬಾರದು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಅಭ್ಯರ್ಥಿಯ ಗರಿಷ್ಟ ವಯೋಮಿತಿಯು 40 ವರ್ಷ ಆಗಿರಬೇಕು. ವಕೀಲ ವೃತ್ತಿಯನ್ನು ನಡೆಸಲು ಅರ್ಹರಾದ ಕಾನೂನು ಪದವಿ ಪಾಸು ಮಾಡಿರಬೇಕು. ಅರ್ಜಿಯನ್ನು ಸಲ್ಲಿಸಲು ಜ.30 ಕೊನೆಯ ದಿನಾಂಕವಾಗಿದೆ.
ತರಬೇತಿಯ ಅವಧಿ 4 ವರ್ಷಗಳಾಗಿದ್ದು, ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ 5,000 ರೂ. ಶಿಷ್ಯ ವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಆಯ್ಕೆ ಸಮಿತಿಯು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ ಕನಿಷ್ಟ 15 ವರ್ಷಗಳ ವಕೀಲ ವೃತ್ತಿಯಲ್ಲಿ ಅನುಭವವುಳ್ಳ ವಕೀಲರ ಅಧೀನದಲ್ಲಿ ತರಬೇತಿಗೆ ನಿಯೋಜಿಸಲಾಗುವುದು.
ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ, ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಅಬ್ಬಕ್ಕನಗರ, ಕೊಟ್ಟಾರ, ಮಂಗಳೂರು-6, ಇವರಿಗೆ ಸಲ್ಲಿಸಲು ಪ್ರಕಟನೆ ತಿಳಿಸಿದೆ.







