ಬೆಂಗಳೂರು: ನಮ್ಮ ಮೆಟ್ರೋ ರೈಲು ಹೆಚ್ಚುವರಿ ಟ್ರಿಪ್‌ಗೆ ಬ್ರೇಕ್
ಬೆಂಗಳೂರು, ಜ. 5: ಪ್ರಯಾಣಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ರೈಲಿನ ಟ್ರಿಪ್‌ಗಳನ್ನು ಹೆಚ್ಚಿಸಿದ್ದ ಬಿಎಂಆರ್‌ಸಿಎಲ್ ಕೆಲ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಹಳೆ ವೇಳಾಪಟ್ಟಿಯಂತೆ ರೈಲು ಸಂಚಾರ ನಡೆಸಲು ನಿರ್ಧರಿಸಿದೆ.
ಹೊಸ ವರ್ಷದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಮೈಸೂರು ರಸ್ತೆಯ ನಾಯಂಡಹಳ್ಳಿ ಮತ್ತು ಬೈಯಪ್ಪನಹಳ್ಳಿ ನಡುವಿನ ಮೆಟ್ರೋ ನೇರಳೆ ಮಾರ್ಗದಲ್ಲಿ 10 ಟ್ರಿಪ್‌ಗಳು ಹಾಗೂ ತುಮಕೂರು ರಸ್ತೆಯ ನಾಗಸಂದ್ರ-ಯಲಚೇನಹಳ್ಳಿ ಮಾರ್ಗದ ಹಸಿರು ಮಾರ್ಗದಲ್ಲಿ ಮೂರು ಟ್ರಿಪ್ ಹೆಚ್ಚಿಸಲಾಗಿತ್ತು. ಅಲ್ಲದೆ, ಪ್ರಯಾಣಿಕರ ಒತ್ತಡ ಆಧರಿಸಿ ಬೆಳಗ್ಗೆ-ಸಂಜೆ ವೇಳೆ 3.5 ನಿಮಿಷಕ್ಕೊಂದು ರೈಲು ಸಂಚಾರಕ್ಕೆ ತೀರ್ಮಾನಿಸಲಾಗಿತ್ತು.
ಹೊಸ ವರ್ಷಕ್ಕೆ ನಮ್ಮ ಮೆಟ್ರೋ ಪ್ರಕಟಿಸಿದ್ದ ನೂತನ ಸೇವೆಗೆ ರೈಲ್ವೆ ಪ್ರಯಾಣಿಕರು ಸಂತಸಗೊಂಡಿದ್ದರು. ಆದರೆ, ಇದೀಗ ಮಾರ್ಗದಲ್ಲಿ ಒತ್ತಡ ಹೆಚ್ಚಾದ ಕಾರಣಕ್ಕೆ ಇತ್ತೀಚೆಗೆ ಸುರಂಗ ಮಾರ್ಗದಲ್ಲಿ ವಿದ್ಯುತ್ ಸಮಸ್ಯೆಯಿಂದ 5 ನಿಮಿಷ ರೈಲು ನಿಂತ ಹಿನ್ನೆಲೆಯಲ್ಲಿ ಹೆಚ್ಚುವರಿ ಸಂಚಾರ ವ್ಯವಸ್ಥೆಯನ್ನು ಹಿಂಪಡೆದಿದೆ ಎಂದು ತಿಳಿದು ಬಂದಿದೆ.





