ಕೃಷಿ ಅಭಿವೃದ್ಧಿ-ನೂತನ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ: ಡಾ.ಜೆನ್ನಿ ಬೋರ್ಲಾಗ್ ಲೂಬೆ

ಧಾರವಾಡ, ಜ.5: ವಾತಾವರಣದಲ್ಲಿ ಉಂಟಾಗುತ್ತಿರುವ ಜಾಗತಿಕ ಬದಲಾವಣೆಗಳಿಂದ ಆಹಾರ ಉತ್ಪಾದನೆ, ಕೃಷಿ ಬೆಳವಣಿಗೆಗೆ ಹಿನ್ನೆಡೆಯಾಗಿದ್ದು, ಈ ನಿಟ್ಟಿನಲ್ಲಿ ಅಧ್ಯಯನ ಮತ್ತು ಸಂಶೋಧನೆಗೆ ಡಾ.ನಾರ್ಮನ್ ಬೋರ್ಲಾಗ್ ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ಕೇಂದ್ರವು ಆದ್ಯತೆ ನೀಡಿ ಕೆಲಸ ಮಾಡಲಿದೆ ಎಂದು ಅಮೆರಿಕಾದ ಬೋರ್ಲಾಂಗ್ ಗ್ಲೋಬಲ್ ರಸ್ಟ್ ಇನಿಶಿಯೇಟಿವ್ ಸಂಸ್ಥೆಯ ಅಧ್ಯಕ್ಷೆ ಡಾ.ಜೆನ್ನಿ ಬೋರ್ಲಾಗ್ ಲೂಬೆ ಹೇಳಿದರು.
ಶುಕ್ರವಾರ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಡಾ.ನಾರ್ಮನ್ ಬೋರ್ಲಾಗ್ ಅಂತಾರಾಷ್ಟ್ರೀಯ ಕೃಷಿ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ನಾರ್ಮನ್ ಬೋರ್ಲಾಗ್ ಏಷ್ಯಾ ಮತ್ತು ಆಫ್ರಿಕನ್ ದೇಶಗಳಲ್ಲಿನ ಆಹಾರ ಸಮಸ್ಯೆಗಳ ಪರಿಹಾರ ಕಾಣಲು ಮತ್ತು ಅಗತ್ಯ ಪ್ರಮಾಣದ ಆಹಾರವನ್ನು ಸ್ವಯಂ ಆಗಿ ಉತ್ಪಾದಿಸಿಕೊಳ್ಳುವಂತೆ ಮಾಡಲು ಅನೇಕ ಸಂಶೋಧನೆಗಳನ್ನು ಮಾಡಿದ್ದರು ಎಂದು ಅವರು ಹೇಳಿದರು.
ಭಾರತವು ಸ್ವಾತಂತ್ರ್ಯ ನಂತರ ಅನುಭವಿಸಿದ ಆಹಾರ ಸಮಸ್ಯೆ, ಆಹಾರ ಉತ್ಪಾದನೆ ಸಮಸ್ಯೆಗಳನ್ನು ಸಮರ್ಥವಾಗಿ ಭಾರತೀಯ ನಾಯಕರ ಮತ್ತು ವಿಜ್ಞಾನಿಗಳ ಸಹಕಾರದಿಂದ ಪರಿಹರಿಸಿದರು. ಜಾಗತಿಕ ಮಟ್ಟದಲ್ಲಿ ಹಸಿರುಕ್ರಾಂತಿಗೆ ಡಾ.ನಾರ್ಮನ್ ಬೋರ್ಲಾಗ್ ಬಹು ಮಟ್ಟಿನ ಕೊಡುಗೆ ನೀಡಿದ್ದಾರೆ ಎಂದು ಜೆನ್ನಿ ಬೋರ್ಲಾಗ್ ತಿಳಿಸಿದರು.
2050ರ ಹೊತ್ತಿಗೆ ಕೃಷಿ, ಆಹಾರ ಉತ್ಪಾದನೆಗಳಿಗೆ ಏದುರಾಗಬಹುದಾದ ತೊಂದರೆಗಳನ್ನು ಸಮರ್ಥವಾಗಿ ನಿಭಾಯಿಸಲು ಇಂದಿನ ಯುವ ವಿದ್ಯಾರ್ಥಿಗಳನ್ನು, ಸಂಶೋಧಕರನ್ನು ಮತ್ತು ಯುವ ರೈತರನ್ನು ಸಜ್ಜುಗೊಳಿಸಬೇಕಿದೆ. ಈ ಹಿನ್ನೆಲೆಯಲ್ಲಿ ಡಾ.ನಾರ್ಮನ್ ಬೋರ್ಲಾಗ್ ಕೃಷಿ ಅಭಿವೃದ್ಧಿ ಕೇಂದ್ರ ಅಧ್ಯಾಪಕರಿಗೆ, ಸಂಶೋಧಕರಿಗೆ, ವಿದ್ಯಾರ್ಥಿಗಳೊಂದಿಗೆ ಯುವ ರೈತರಿಗೆ ಅಧ್ಯಯನ ಪ್ರವಾಸ, ಪರಸ್ಪರ ವಿನಿಮಯ ಕಾರ್ಯಕ್ರಮ ರೂಪಿಸಿದೆ. ಹೊಸ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡಲಿದೆ ಎಂದು ಅವರು ಹೇಳಿದರು.
ಹಸಿರು ಕ್ರಾಂತಿಯ ಹರಿಕಾರ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಡಾ.ನಾರ್ಮನ್ ಬೋರ್ಲಾಗ್ ಹೆಸರಿನಲ್ಲಿ ಅಭಿವೃದ್ಧಿ ಕೇಂದ್ರ ಆರಂಭಿಸಿರುವುದರೊಂದಿಗೆ ಅವರ ಪ್ರತಿಮೆಯನ್ನು ಅನಾವರಣ ಮಾಡಿದ್ದಕ್ಕಾಗಿ ಅವರ ಮಗಳಾಗಿ ನನಗೆ ಹೆಮ್ಮೆ ಎನಿಸಿದೆ ಜೆನ್ನಿ ಬೋರ್ಲಾಗ್ ಸಂತಸ ವ್ಯಕ್ತಪಡಿಸಿದರು.
ಕೇಂದ್ರದ ಕಾರ್ಯಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಅಮೆರಿಕಾದ ಕಾರ್ನಲ್ ವಿಶ್ವವಿದ್ಯಾಲಯದ ಸಹ ನಿರ್ದೇಶಕ ಡಾ.ಕೆ.ವಿ.ರಾಮನ್, ಹೈದ್ರಾಬಾದ್ ಸದ್ಗುರು ವ್ಯವಸ್ಥಾಪನಾ ಸಮಾಲೋಚಕ ಸಂಸ್ಥೆಯ ಮುಖ್ಯಸ್ಥ ಡಾ.ಕೆ.ವಿಜಯ ರಾಘವನ್ ಮತ್ತು ಅಮೆರಿಕಾದ ಎ ಆ್ಯಂಡ್ ಎಂ ವಿಶ್ವವಿದ್ಯಾಲಯದ ತರಕಾರಿ ಮತ್ತು ಹಣ್ಣು ಅಭಿವೃದ್ಧಿ ಕೇಂದ್ರದ ಡಾ.ಭೀಮು ಪಾಟೀಲ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಕಾರ್ನಲ್ ವಿವಿಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ನಿರ್ದೇಶಕ ಡಾ.ರೊನ್ನಿಯಾ ಕಾಫಮನ್, ಕಾರ್ಯನಿರ್ವಾಹಕ ಡೀನ್ ಡಾ.ಮ್ಯಾಕ್ಸ್ ಜೆ.ಫೆಪರ್ ಮಾತನಾಡಿ, ಧಾರವಾಡ ಕೃಷಿ ವಿವಿ ಡಾ.ನಾರ್ಮನ್ ಬೋರ್ಲಾಗ್ ಕೇಂದ್ರದಿಂದ ಸಂಘಟಿಸುವ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕುಲಪತಿ ಡಾ.ಬಿ.ಪಿ.ಬಿರಾದರ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಈಶ್ವರಚಂದ್ರ ಹೊಸಮನಿ, ಡಾ.ರಾಜೇಂದ್ರ ಸಣ್ಣಕ್ಕಿ, ಬಿ.ಸುಮಿತಾದೇವಿ, ಕೃಷಿ ವಿವಿಯ ಪಿಪಿಎಮ್‌ಸಿ ಘಟಕದ ಮುಖ್ಯಸ್ಥ ಡಾ.ರಾಜೇಂದ್ರ ಪೊದ್ದಾರ, ಡಾ.ಎನ್.ಕೆ.ಬಿರಾದರ, ವಿಶ್ರಾಂತ ಕುಲಪತಿ ಡಾ.ಜಿ.ವಿ.ಗೌಡಾ, ಡಾ.ಆರ್.ಆರ್. ಹಂಚಿನಾಳ ಸೇರಿದಂತೆ ವಿವಿ ಡೀನ್‌ರು, ಅಧಿಕಾರಿಗಳು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಯುವ ರೈತರು ಪಾಲ್ಗೊಂಡಿದ್ದರು.







