ಸರ್ವಧರ್ಮೀಯರಿಗೆ ಒಂದೇ ಪ್ರಾರ್ಥನಾ ಕೊಠಡಿ
ಚಂಡೀಗಢದ ಸರಕಾರಿ ಆಸ್ಪತ್ರೆಯಲ್ಲಿ ವಿನೂತನ ಕಾರ್ಯ

ಚಂಡೀಗಡ, ಜ.6: ‘ದೇವರು ಒಬ್ಬನೇ‘ ಎಂಬ ತತ್ವದಡಿ ನಗರದ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ(ಜಿಎಂಸಿಎಚ್) ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್‌ಗಳು ಹಾಗೂ ಬೇರೆ ಬೇರೆ ಧರ್ಮದ ಮೇಲೆ ನಂಬಿಕೆ ಇರುವವರು ಪ್ರಾರ್ಥನೆ ಸಲ್ಲಿಸಲು ಆಸ್ಪತ್ರೆಯಲ್ಲಿ ಕೊಠಡಿಯೊಂದನ್ನು ತೆರೆಯಲಾಗಿದೆ.
ಜಿಎಂಸಿಎಚ್ ನಗರದಲ್ಲಿ ಇಂತಹ ವ್ಯವಸ್ಥೆಯನ್ನು ಕಲ್ಪಿಸಿರುವ ಮೊತ್ತ ಮೊದಲ ಸರಕಾರಿ ಆಸ್ಪತ್ರೆಯಾಗಿದ್ದು, ಈ ವಿನೂತನ ಕಾರ್ಯಕ್ಕೆ ಭಾರೀ ಶ್ಲಾಘನೆ ವ್ಯಕ್ತವಾಗಿದೆ. ಜನರು ಇದನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದು, ಬೆಳಗ್ಗೆ ಹಾಗೂ ಸಂಜೆ ವೇಳೆ ಈ ಕೊಠಡಿ ತುಂಬಿತುಳುಕುತ್ತಿರುತ್ತದೆ. 10ಕ್ಕೂ ಹೆಚ್ಚು ಆಪರೇಶನ್ ಥಿಯೇಟರ್‌ಗಳಿರುವ ಆಸ್ಪತ್ರೆ ಕಟ್ಟಡದ ‘ಸಿ’ ಬ್ಲಾಕ್‌ನಲ್ಲಿ ಪ್ರಾರ್ಥನಾ ಕೊಠಡಿಯಿದೆ. ಈ ವ್ಯವಸ್ಥೆಯನ್ನು ಕುಟುಂಬ ಸದಸ್ಯರುಗಳು ಹಾಗೂ ರೋಗಿಗಳೊಂದಿಗೆ ಇರುವ ವ್ಯಕ್ತಿಗಳು ಮಾತ್ರ ಬಳಸಬಹುದಾಗಿದೆ.
‘‘ನಾನು ಇಂದು ಬೆಳಗ್ಗೆ ಪ್ರಾರ್ಥನೆ ಸಲ್ಲಿಸುವಾಗ ನನ್ನ ಬಳಿ ಮುಸ್ಲಿಂ ವ್ಯಕ್ತಿಯೊಬ್ಬರಿದ್ದರು. ಅವರು ಕೂಡ ಪ್ರಾರ್ಥನೆ ಸಲ್ಲಿಸುತ್ತಿದ್ದರು... ಎಲ್ಲ ಧರ್ಮದವರು ಇಲ್ಲಿ ಒಂದೇ ಸ್ಥಳದಲ್ಲಿ ಸೇರುತ್ತಿದ್ದಾರೆ. ಈ ಸ್ಥಳದಲ್ಲಿ ತುಂಬಾ ಶಾಂತಿ ಸಿಗುತ್ತಿದೆ. ಆಸ್ಪತ್ರೆಯ ಆಡಳಿತ ಮಂಡಳಿ ಇಂತಹ ವ್ಯವಸ್ಥೆ ಕಲ್ಪಿಸಿ ಅದ್ಭುತ ಕೆಲಸ ಮಾಡಿದೆ’’ ಎಂದು ಬಲ್ಜಿಂದರ್ ಸಿಂಗ್ ಹೇಳಿದ್ದಾರೆ.
‘‘ಪ್ರತಿಯೊಬ್ಬರು ಕಷ್ಟದ ಸಮಯದಲ್ಲಿದ್ದಾಗ ದೇವರ ಮೊರೆ ಹೋಗಲು ಇಲ್ಲಿ ಬಂದು ಪ್ರಾರ್ಥಿಸುತ್ತಾರೆ. ಇಂತಹ ಸಮಯದಲ್ಲಿ ಯಾರ ಮನಸ್ಸಿನಲ್ಲಿ ಧರ್ಮಬೇಧವಿರುವುದಿಲ್ಲ. ಇಂತಹ ಕ್ಷಣಗಳು ನಾವೆಲ್ಲರೂ ಒಟ್ಟಿಗೆ ಇರಬೇಕೆಂಬ ಭಾವನೆ ಮೂಡಿಸುತ್ತವೆ’’ ಎಂದು ಉತ್ತರಪ್ರದೇಶದ ಸಹರಾನ್ಪುರದ ಮುಹಮ್ಮದ್ ಅಫ್ರಝುಲ್ ಹೇಳುತ್ತಾರೆ.
ಪ್ರಾರ್ಥನಾ ಕೊಠಡಿ ವಿಶಾಲವಾಗಿದ್ದು, ಪ್ರವೇಶದ್ವಾರಕ್ಕೆ ಮುಖವಾಗಿ ಒಂದು ಟೇಬಲ್ ಇಡಲಾಗಿದೆ. ಟೇಬಲ್ ಹತ್ತಿರದ ಬೋರ್ಡ್‌ನಲ್ಲಿ ಎಲ್ಲ ಧರ್ಮದವರ ಸಂಕೇತಗಳನ್ನು ಮುದ್ರಿಸಲಾಗಿದೆ. ಬೆಳಗ್ಗೆ ಹಾಗೂ ಸಂಜೆ ಕೊಠಡಿ ಜನರಿಂದ ತುಂಬಿರುತ್ತದೆ. ‘‘ಆಸ್ಪತ್ರೆಯ ಹೊರಗಡೆ ಕೆಲುವರು ತಮ್ಮ ಸಂಬಂಧಿಕರು ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿರುವುದನ್ನು ಗಮನಿಸಿದ್ದೆ. ಈ ಹಿಂದೆ ಎಲ್ಲರಿಗೂ ಪ್ರಾರ್ಥನೆ ಸಲ್ಲಿಸಲು ಅವಕಾಶವಿರಲಿಲ್ಲ. ಈ ಪ್ರಾರ್ಥನಾ ಕೊಠಡಿ ಆರಂಭಿಸಿದ ಬಳಿಕ ಎಲ್ಲ ಧರ್ಮೀಯರು ಒಂದೇ ಸೂರಿನಲ್ಲಿ ಸೇರುವಂತಾಗಿದೆ’’ ಎಂದು ಪ್ರಾರ್ಥನಾ ಕೊಠಡಿ ನಿರ್ಮಾಣಕ್ಕೆ ಕಾರಣರಾಗಿರುವ ಡಾ.ರವಿ ಗುಪ್ತಾ ಹೇಳಿದ್ದಾರೆ.