ಬಿಜೆಪಿಯವರದ್ದು ಹಾವಿಲ್ಲದ ಖಾಲಿ ಬುಟ್ಟಿ: ಸಿದ್ದರಾಮಯ್ಯ ಲೇವಡಿ

ಅಜ್ಜಂಪುರ, ಜ.6: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಏಳಿಗೆಗೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಅಲ್ಪಸಂಖ್ಯಾತರು ದಾರಿ ತಪ್ಪಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಶುಕ್ರವಾರ ಸಂಜೆ ಅಜ್ಜಂಪುರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಕೆ.ಜೆ.ಪಿಯಲ್ಲಿ ಇದ್ದಾಗ ಯಡಿಯೂರಪ್ಪ ಟಿಪ್ಪು ಜಯಂತಿ ಆಚರಿಸಿ ಪೇಟ ಧರಿಸಿ, ಖಡ್ಗ ಹಿಡಿದು ಹಾಡಿ ಹೊಗಳಿದ್ದರು. ಆಗ ಶೋಭಾ ಕರಂದ್ಲಾಜೆಯೂ ಪಕ್ಕದಲ್ಲಿ ಕುಳಿತಿದ್ದರು. ಈಗ ಅದೇ ಟಿಪ್ಪುವನ್ನು ಮತಾಂಧ, ಅತ್ಯಾಚಾರಿ ಎಂದು ಟೀಕಿಸುತ್ತಿದ್ದಾರೆ. ಬಿಜೆಪಿಯದು ಇಬ್ಬಗೆ ನೀತಿ, ಅವರದು ಎರಡು ನಾಲಗೆ ಎಂದು ಟೀಕಿಸಿದರು.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಬಡ ಜನರಿಗೆ ಹರಕಲು ಸೀರೆ, ಬಡ ವಿದ್ಯಾರ್ಥಿಗಳಿಗೆ ಮುರುಕಲು ಸೈಕಲ್ ನೀಡಿದರು ಎಂದು ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಎಲ್ಲಾ ಬಡ ಜನರ ನೋವನ್ನು ಅರ್ಥ ಮಾಡಿಕೊಂಡಿರುವ ನಾವು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದಾಗಿ ವಿವರ ನೀಡಿದರು.
ಸುಳ್ಳು ಬಿಜೆಪಿಯ ಮನೆ ದೇವರು. ತಮ್ಮ ವಿರುದ್ಧ ದಾಖಲೆಗಳನ್ನು ಬಿಡುವುದಾಗಿ ಹೇಳುತ್ತಲೇ ಬಂದಿದ್ದಾರೆ. ಹಾವಿಲ್ಲದ ಖಾಲಿ ಬುಟ್ಟಿ ಅದು. ಬರೀ ಪುಂಗಿ ಊದುತ್ತಾರೆ. ಮೋದಿ ಆಟ ಇಲ್ಲಿ ನಡೆಯುವುದಿಲ್ಲ. ಮಿಷನ್ 150 ಈಗ 50 ಕ್ಕೆ ಇಳಿದಿದೆ . ಉಳುಮೆ ಮಾಡುವ ಎತ್ತಿಗೆ ಮೇವು ಹಾಕಿ, ಮತ್ತೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ ಸಿದ್ದರಾಮಯ್ಯ, ಶಾಸಕ ಶ್ರೀನಿವಾಸ್, ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಓಟು ಹಾಕುತ್ತಿರಲ್ಲಾ ಎಂದು ಕಾರ್ಯಕ್ರಮದಲ್ಲಿ ಸೇರಿದ ಜನರನ್ನು ಪ್ರಶ್ನಿಸಿದರು.
ಶಾಸಕ ಶ್ರೀನಿವಾಸ್ ಅಜ್ಜಂಪುರವನ್ನು ತಾಲೂಕು ಕೇಂದ್ರವಾಗಿ ಘೋಷಿಸಿದ ಮುಖ್ಯಮಂತ್ರಿಗಳನ್ನು ಅಭಿನಂದಿಸಿ, 800 ಕೋಟಿ ರೂ. ಕಾಮಗಾರಿ ನಡೆದಿದೆ ಎಂದು ವಿವರ ನೀಡಿದರು.
ಕಾರ್ಯಕ್ರಮದಲ್ಲಿ ಸಚಿವ ರೋಶನ್ ಬೇಗ್, ಶಾಸಕ ಶ್ರೀನಿವಾಸ್, ಅರಣ್ಯ ಮತ್ತು ವಸತಿ ವಿಹಾರಧಾಮದ ಅಧ್ಯಕ್ಷ ಎ.ಎನ್.ಮಹೇಶ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಾಯಮ್ಮ, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿಪಂ ಸಿಇಓ ಸತ್ಯಭಾಮ, ಕಾಂಗ್ರೆಸ್ ಜಿಲ್ಲಾದ್ಯಕ್ಷ ಡಾ.ಡಿ.ಎಲ್.ವಿಜಯಕುಮಾರ್ ಮತ್ತಿತರರಿದ್ದರು.







